ತುಮಕೂರು :ತಾಲೂಕಿನ ಹಿರೇಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಮಾರ್ಗದರ್ಶನ ಮತ್ತು ಡಿ.ನಾಗೇನಹಳ್ಳಿ ಸುತ್ತಮುತ್ತಲ ರೈತರ ಶ್ರಮದಿಂದ ಕೇಂದ್ರ ಸರ್ಕಾರದ ನಿಕ್ರಾ ಯೋಜನೆಯ ಯಶಸ್ಸಿಗೆ ಹಾಗೂ ಕೃಷಿ ಪದ್ದತಿ ಸಹಕಾರಕ್ಕೆ 'ಎಲೆರಾಂಪುರ ಗ್ರಾಮ ಪಂಚಾಯತ್'ಗೆ ಕೇಂದ್ರ ಸರ್ಕಾರದಿಂದ 'ಉತ್ತಮ ಪಂಚಾಯತ್' ಪ್ರಶಸ್ತಿ ಲಭಿಸಿದೆ.
ಮಳೆಯಾಧಾರಿತ ಖುಷ್ಕಿ ಬೇಸಾಯದ ರೈತರು ಲಾಭ ಕಾಣದೆ ಸಂಕಷ್ಟದಲ್ಲಿಯೇ ಬದುಕುತ್ತಿದ್ದರು. ಈ ರೈತರ ಒಣ ಬೇಸಾಯ ಪದ್ದತಿಗಳನ್ನು ಅಭಿವೃದ್ಧಿಗೊಳಿಸಲು ಕೇಂದ್ರ ಸರ್ಕಾರ 2011ರಲ್ಲಿ ಭಾರತೀಯ ಕೃಷಿ ಅಧ್ಯಯನ ಅಡಿಯಲ್ಲಿ 'ನ್ಯಾಷನಲ್ ಇನ್ವೆನ್ಷನ್ ಇನ್ ಕ್ಲೈಮೇಟ್ ರಿಸರ್ಚ್' (ನಿಕ್ರಾ) ಯೋಜನೆ ಕಾರ್ಯರೂಪಗೊಳಿಸಿತು.
ಎಲೆರಾಂಪುರ ಗ್ರಾಮ ಪಂಚಾಯತ್‌ಗೆ ಕೇಂದ್ರ ಸರ್ಕಾರದ 'ಉತ್ತಮ ಪಂಚಾಯತ್' ಪುರಸ್ಕಾರ ಹೈದರಾಬಾದ್ನ ಕೇಂದ್ರೀಯ ಒಣ ಬೇಸಾಯ ಪದ್ದತಿ ಮಾರ್ಗದರ್ಶನದಲ್ಲಿ ಗ್ರಾಮಗಳಲ್ಲಿ ಈ ಯೋಜನೆ ಅನುಷ್ಠಾನಕ್ಕೆ ತೀರ್ಮಾನಿಸಲಾಯಿತು. ರಾಜ್ಯದಲ್ಲಿ ಮೊದಲು 4 ಜಿಲ್ಲೆಗಳಲ್ಲಿ ಈ ಯೋಜನೆ ಪ್ರಾರಂಭಿಸಲು ಅನುಮತಿ ದೊರೆಯಿತು. ಪ್ರಸ್ತುತ 10 ಗ್ರಾಮಗಳಲ್ಲಿ ನಡೆಯುತ್ತಿದ್ದರೂ, ಪ್ರಥಮ ಹಂತದಲ್ಲಿ ದಕ್ಷಿಣ ಕರ್ನಾಟಕದಲ್ಲಿ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿಯ ಡಿ.ನಾಗೇನಹಳ್ಳಿ ಗ್ರಾಮವನ್ನು ಮೊದಲು ಹಳ್ಳಿಯಾಗಿ ಆರಿಸಿಕೊಳ್ಳಲಾಗಿದೆ.
ಈ ಯೋಜನೆಯಡಿ ಹಿರೇಹಳ್ಳಿಯ ಕೃಷಿ ವಿಜ್ಞಾನಿಗಳು ಗ್ರಾಮದ ಜಮೀನುಗಳಲ್ಲಿ ಮಣ್ಣು ಪರೀಕ್ಷೆ ಮಾಡಿ, ಮಣ್ಣು ನಿರ್ವಹಣೆ, ಸವಕಳಿ ತಡೆಯುವಿಕೆ, ನೀರು ನಿರ್ವಹಣೆ, ಕಡಿಮೆ ನೀರಿನಲ್ಲಿ ಬೆಳೆಯುವ ತಳಿಯ ಬೆಳೆಗಳನ್ನು ರೈತರ ಜತೆಗೂಡಿ ಕೃಷಿ ಮಾಡಿಸಿದ್ದಾರೆ. ಈ ಪ್ರದೇಶದಲ್ಲಿ ಸುಮಾರು 1250 ಎಕರೆ ಖುಷ್ಕಿ ಜಮೀನಲ್ಲಿ 150 ಹೆಕ್ಟೇರ್ ಟ್ರಂಚ್ ನಾಲಾ ಬದುಗಳು, 85 ಕೃಷಿ ಹೊಂಡ, ಚೆಕ್ ಡ್ಯಾಂಗಳ ನಿರ್ಮಾಣ ಹಾಗೂ ಹೊಳೆತ್ತುವಿಕೆ, ಚೆಕ್ ಡ್ಯಾಂಗಳಲ್ಲಿ ನೀರು ಸಂಗ್ರಹಿಸಿ ಕೊಳವೆ ಬಾವಿಗಳಲ್ಲಿ ಅಂತರ್ಜಲ ಹೆಚ್ಚುವಂತೆ ಮಾಡಲಾಗಿದೆ.
1250 ಎಕರೆ ಜಮೀನಿನ ಪೈಕಿ ಸುಮಾರು ಶೇ.33 ರಷ್ಟು ಜಮೀನಿನಲ್ಲಿ ಕೃಷಿ ತೋಟಗಾರಿಕೆ, ಅರಣ್ಯ ಇಲಾಖೆಗಳ ಲಾಭದಾಯಕ ಹುಣಸೆ, ಗೋಡಂಬಿ, ಬೆಟ್ಟದ ನೆಲ್ಲಿಕಾಯಿ ಸೇರಿದಂತೆ ಹಲವು ಮರಗಳನ್ನು ಬೆಳೆಸಲಾಗಿದೆ. ಕಡಿಮೆ ನೀರಿನಲ್ಲಿ ಹೆಚ್ಚು ಇಳುವರಿ ಬರುವ, ಮಳೆಯ ವೈಪರೀತ್ಯವನ್ನು ತಡೆಯುವ ಲಾಭದಾಯಕ ಸಂಶೋಧನೆಯ ನೂತನ ತಳಿಯನ್ನು ಬೆಳೆಸಲಾಗಿದೆ. ಅಂತರ ಮತ್ತು ಮಿಶ್ರ ಬೆಳೆ ಪದ್ದತಿಗೆ ಒತ್ತು ನೀಡಲಾಗಿದೆ. ಈ ಕೆಲಸಗಳಿಗೆ ಕೃಷಿ ವಿಜ್ಞಾನ ಕೇಂದ್ರ ನಿಕ್ರಾ ಯೋಜನೆಯಲ್ಲಿ ಸುಮಾರು ಒಂದು ಕೋಟಿ ರೂ. ಖರ್ಚು ಮಾಡಿದೆ.
ಡಿ.ನಾಗೇನಹಳ್ಳಿಯಲ್ಲಿ ಸುತ್ತಮುತ್ತಲಿನ ಗ್ರಾಮದ 800 ರೈತರು ಸೇರಿ ಗ್ರಾಮ ಚೇತನ ರೈತ ಉತ್ಪಾದನಾ ಕಂಪನಿಯನ್ನು (ಎಎಫ್ಓ) ನಬಾರ್ಡ್ ಯೋಜನೆಯಡಿ ಮಾಡಿಕೊಂಡಿದ್ದಾರೆ. ಇದಕ್ಕೆ ತಾಂತ್ರಿಕತೆ ಯಂತ್ರ ಕೆವಿಕೆ ನೀಡಿದೆ. ಆದರೆ, ಗ್ರಾಮ ಪಂಚಾಯತ್ ಸೂಕ್ತ ಜಾಗ ಒದಗಿಸಿ ಕೊಡಬೇಕಿದೆ. ಈ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಪರಿಶೀಲಿಸಿದ ಕೇಂದ್ರ ಅಧ್ಯಯನ ತಂಡ ಎಲೆರಾಂಪುರ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಡಿ.ನಾಗೇನಹಳ್ಳಿ ಮತ್ತು ತಂಗನಹಳ್ಳಿಯ ಒಣ ಭೂಮಿ ಬೇಸಾಯ ಅಭಿವೃದ್ಧಿಯ ಯಶಸ್ಸಿಗೆ ಕೃಷಿ ವಿಜ್ಞಾನ ಕೇಂದ್ರ, ಹಿರೇಹಳ್ಳಿ ಮತ್ತು ಎಲೆರಾಂಪುರ ಗ್ರಾಮ ಪಂಚಾಯತ್‌ಗೆ ಜಂಟಿಯಾಗಿ 'ಉತ್ತಮ ಪಂಚಾಯತ್' ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ನೀಡಿದೆ.
ರಾಜ್ಯದಲ್ಲಿ ನಡೆಯುತ್ತಿರುವ ನಿಕ್ರಾ ಕೃಷಿಗೆ ಪ್ರಶಸ್ತಿ ಪಡೆದ ಮೊದಲ ಗ್ರಾಪಂ ಇದಾಗಿದೆ. ಈ ಯೋಜನೆ ಬಯಲು ಸೀಮೆಯ ಕೃಷಿಕರಿಗೆ ಅತ್ಯಂತ ಆಶಾದಾಯಕವಾಗಿದ್ದು, ಪ್ರಶಸ್ತಿ ಮತಷ್ಟು ಹುರುಪು ನೀಡಿದೆ. ಹಿರೇಹಳ್ಳಿಯ ಕೆವಿಕೆ, ಎಲೆರಾಂಪುರ ಗ್ರಾಮ ಪಂಚಾಯತ್ ಮತ್ತು ರೈತರ ಶ್ರಮಕ್ಕೆ ಕೇಂದ್ರ ಸರ್ಕಾರದ ಪ್ರಶಸ್ತಿ ದೊರೆತಿರುವುದು ಸಂತಸ ತಂದಿದ್ದು, ಎಲ್ಲರನ್ನು ಅಭಿನಂದಿಸುತ್ತೇನೆ. ಕ್ಷೇತ್ರದ ಎಲ್ಲಾ ಭಾಗಗಳಲ್ಲೂ ಈ ಯೋಜನೆಯನ್ನು ಜಾರಿಗೊಳಿಸಿ ರೈತರ ಏಳಿಗೆಗೆ ಶ್ರಮಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ ವಿದ್ಯಾಕುಮಾರಿ ತಿಳಿಸಿದ್ದಾರೆ.