ತುಮಕೂರು: ದೇಶದ 100 ಸ್ಮಾರ್ಟ್ ಸಿಟಿಗಳಲ್ಲಿ ತುಮಕೂರು ಸ್ಥಾನ ಪಡೆದಿದ್ದು, ಇದರಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳಲು ಜಿಲ್ಲೆಯ ಅಧಿಕಾರಿಗಳು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಜಿಪಿಎಸ್ ಆಧಾರಿತ ಮರ ಗಣತಿಗೆ ಚಾಲನೆ ಸಿಕ್ಕಿದೆ.
ಸಂಸದ ಬಸವರಾಜ್ ನೇತೃತ್ವದಲ್ಲಿ ದಿಶಾ ಸಮಿತಿಯು ಯೋಜನೆ ಹಾಗೂ ಕಾಮಗಾರಿಗಳ ಅನುಷ್ಠಾನಕ್ಕೆ ಹೆಚ್ಚಿನ ಆಸಕ್ತಿ ವಹಿಸಿದೆ. ಮರಗಳ ಗಣತಿಗೆ ಚಾಲನೆ ನೀಡಲಾಗಿದ್ದು, ಇದಕ್ಕಾಗಿ ವಿಶೇಷ ಆ್ಯಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ.
ಈ ಆ್ಯಪ್ ಜಿಪಿಎಸ್ ಆಧಾರಿತ ಸೇವೆಯಾಗಿದ್ದು, ಆ್ಯಪ್ನಲ್ಲಿ ನೋಂದಣಿಯಾದ ಮರಕ್ಕೆ ತೊಂದರೆಯಾದರೆ ತಕ್ಷಣವೇ ಸೂಚನೆ ರವಾನೆ ಆಗುತ್ತದೆ. ನಗರದಲ್ಲಿರುವ ಮರಗಳ ಸಂಖ್ಯೆ ಸ್ಪಷ್ಟವಾಗಿ ಲಭ್ಯವಾಗಲಿದೆ. ಮರಗಳ ಗಣತಿಗೆ ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗಿದ್ದು, ಆಯಾ ವಾರ್ಡ್ ಮಟ್ಟದಲ್ಲಿ ಸಾರ್ವಜನಿಕರ ಸಮಿತಿಗಳನ್ನು ರಚಿಸಲಿದೆ.
ಸ್ಮಾರ್ಟ್ ಸಿಟಿಗಾಗಿ ನಗರದಲ್ಲಿ ಪ್ರತಿ ಇಂಚು ಭೂ ಬಳಕೆ, ಕಾಮಗಾರಿ ಹಾಗೂ ಕಟ್ಟಡದ ಇತಿಹಾಸ ಸಹಿತ ಮಾಹಿತಿ ಒಳಗೊಂಡಿರಲಿದೆ. ಜಿಐಎಸ್ ಆಧಾರಿತ ಆಸ್ತಿ ಸರ್ವೆ, ನಗರದ ಮೂಲಸೌಕರ್ಯಗಳ ಮಾಸ್ಟರ್ ಪ್ಲಾನ್ ಸೇರಿದಂತೆ ಹಲವು ಯೋಜನೆಗಳ ಅನುಷ್ಠಾನಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ.