ತುಮಕೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ವಿಜಯೇಂದ್ರ ಸ್ಪರ್ಧೆ ಮಾಡುವುದು ಖಚಿತ. ಆದ್ರೆ, ಕ್ಷೇತ್ರ ಇನ್ನೂ ನಿರ್ಧಾರವಾಗಿಲ್ಲ. ಯಾರಿಗೆ ಯಾವ ಜವಾಬ್ದಾರಿ ಕೊಡಬೇಕು ಎನ್ನುವುದನ್ನ ಪಕ್ಷ ತೀರ್ಮಾನ ಮಾಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದರು.
ತುಮಕೂರಿನಲ್ಲಿ ನಡೆದ ಕಾರ್ಯನಿರತ ಪತ್ರಕರ್ತರ ಪದಗ್ರಹಣ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ರಾಜ್ಯದ ಉದ್ದಗಲಕ್ಕೂ ಪ್ರವಾಸ ಪ್ರಾರಂಭವಾಗಿದೆ. ಮುಂಬರುವ ಚುನಾವಣೆಯಲ್ಲಿ 140 ಕ್ಷೇತ್ರಗಳನ್ನ ಗೆದ್ದು ಮತ್ತೆ ಬಿಜೆಪಿ ಅಧಿಕಾರಕ್ಕೆ ತರಬೇಕೆಂಬುದು ನಮ್ಮ ಗುರಿ. ಈ ಹಿನ್ನೆಲೆ ರಾಜ್ಯ ಪ್ರವಾಸ ಪ್ರಾರಂಭವಾಗಿದೆ. ವಾರಕ್ಕೆ ಒಂದೊಂದು ಜಿಲ್ಲೆಗೆ ತೆರಳಿ ಕಾರ್ಯಕರ್ತರ ಜೊತೆಗೆ ಸಮಾಲೋಚನೆ ಮಾಡುತ್ತೇವೆ ಎಂದರು.
ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತಂತೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಮಾತನಾಡಿರುವುದು.. ಎಲ್ಲ ವರ್ಗದ ಜನರನ್ನು ನಮ್ಮ ಜೊತೆಗೆ ತೆಗೆದುಕೊಂಡು ಹೋಗಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಅನೇಕ ಜನ ಬಿಜೆಪಿಗೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ. ಯಾರು ಯಾರು ಬರೋದ್ರಿಂದ ನಮ್ಮ ಪಕ್ಷಕ್ಕೆ ಅನುಕೂಲವಾಗುತ್ತೋ ಅವರನ್ನು ಸೇರಿಸಿಕೊಂಡು ಪಕ್ಷ ಬಲಪಡಿಸುತ್ತೇವೆ. ಈಗಾಗಲೇ ಅನೇಕ ಜನ ಬರುತ್ತಿದ್ದಾರೆ. ಮತ್ತೆ ಯಾರು ಬರುತ್ತಾರೋ ಬರಲಿ, ಪಕ್ಷಕ್ಕೆ ಬರುವವರನ್ನು ಬೇಡ ಅನ್ನುವುದಿಲ್ಲ ಎಂದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಇಡಿಯವರಿಗೆ ಯಾರ ಮೇಲೆ ಅನುಮಾನ ಇರುತ್ತದೋ ಅವರನ್ನ ತನಿಖೆ ಮಾಡ್ತಾರೆ. ಯಾರ ಬಗ್ಗೆ ಏನು ಅನುಮಾನ ಇರುತ್ತೋ ಆ ಬಗ್ಗೆ ತನಿಖೆ ಮಾಡ್ತಾರೆ. ತನಿಖೆ ಬಳಿಕ ಸತ್ಯ ಹೊರ ಬರಲಿದೆ. ನಿರಪರಾಧಿಯಾಗಿದ್ರೆ ಯಾವುದೇ ಗೊಂದಲವಿಲ್ಲದೆ ಹೊರಗೆ ಬರುತ್ತಾರೆ. ಆರೋಪ ಸಾಬೀತಾದ್ರೆ ಎಲ್ಲರಂತೆ ಶಿಕ್ಷೆಯಾಗುತ್ತೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಅಂತಾ ಹೇಳಿದರು.
ಇದನ್ನೂ ಓದಿ:ಯೋಗ ವೇದಿಕೆ ವಿವಾದ ವಿಚಾರ: ಸ್ಪಷ್ಟನೆ ನೀಡಿದ ಸಂಸದ ಪ್ರತಾಪ್ ಸಿಂಹ