ತುಮಕೂರು: ಕುರಿ, ಮೇಕೆ ಸಾಕಾಣಿಕೆ ಮೂಲಕ ಸಾಕಷ್ಟು ಮಂದಿ ಬದುಕು ರೂಪಿಸಿಕೊಂಡಿದ್ದು, ಆಗಾಗ ಕಾಡುವ ರೋಗ ರುಜಿನಗಳು ರೈತರನ್ನು ಬಾಧಿಸುತ್ತಿರುತ್ತವೆ. ಈಗ ನೀಲಿ ನಾಲಿಗೆ ರೋಗ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಜಿಲ್ಲೆಯಲ್ಲಿ ಕುರಿ, ಮೇಕೆಗಳು ಬಲಿಯಾಗುತ್ತಿವೆ.
ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಬಹುತೇಕ ಮಂದಿ ಕುರಿ, ಮೇಕೆ ಸಾಕಾಣಿಕೆ ಮಾಡುವ ಮೂಲಕ ಬದುಕು ಕಂಡುಕೊಂಡಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಬದಲಾದ ಹವಾಮಾನ ವೈಪರೀತ್ಯದಿಂದಾಗಿ ಕುರಿ ಹಾಗೂ ಮೇಕೆಗಳು ವಿಚಿತ್ರ ರೋಗದಿಂದ ಬಳಲುತ್ತಿವೆ. ಜಿಲ್ಲೆಯಲ್ಲಿ ನೀಲಿ ನಾಲಿಗೆ ರೋಗ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸಾವಿರಾರು ಕುರಿ, ಮೇಕೆಗಳು ಸಾವನ್ನಪ್ಪುತ್ತಿವೆ.
ಹಿಂದಿನ ವರ್ಷ ಅಲ್ಲಲ್ಲಿ ಮಾತ್ರ ಈ ನೀಲಿ ನಾಲಿಗೆ ರೋಗ ಕಾಣಿಸಿಕೊಂಡಿತ್ತು. ಆದರೆ ಈ ಬಾರಿ ಜಿಲ್ಲೆಯ ಎಲ್ಲೆಡೆ ಕಾಡುತ್ತಿದೆ. ಕುಣಿಗಲ್‍ನಿಂದ ಶಿರಾ, ಪಾವಗಡದವರೆಗೆ, ತುಮಕೂರಿನಿಂದ ತಿಪಟೂರು ತಾಲೂಕಿನವರೆಗೂ ವ್ಯಾಪಿಸಿದೆ. ಅತಿವೃಷ್ಟಿಯಿಂದ ಬೆಳೆ ಸಂಪೂರ್ಣ ಹಾಳಾಗಿದ್ದು, ಉತ್ತಮ ಮಳೆಯಾಗಿರುವುದರಿಂದ ಜಾನುವಾರುಗಳ ಮೇವಿಗೆ ಕೊರತೆ ಆಗುವುದಿಲ್ಲ. ಚೆನ್ನಾಗಿ ಸಾಕಾಣಿಕೆ ಮಾಡಿ, ಬೆಳೆ ನಷ್ಟವನ್ನು ಜಾನುವಾರುಗಳ ಆದಾಯದ ಮೂಲಕ ಕಾಣುವ ಲೆಕ್ಕಾಚಾರ ಹಾಕಿದ ರೈತರಿಗೆ ಇದೀಗ ಬರಸಿಡಿಲು ಬಡಿದಂತಾಗಿದೆ.
ಕಳೆದ ಮೂರು ತಿಂಗಳಿನಿಂದ ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿರುವುದು ರೋಗ ಉಲ್ಬಣಿಸಲು ಪ್ರಮುಖ ಕಾರಣವಾಗಿದೆ. ಮಳೆಯಿಂದ ಎಲ್ಲೆಡೆ ನೀರು ನಿಂತಿದ್ದು, ಗುಂಡಿಗಳಲ್ಲೂ ನೀರು ಸಂಗ್ರಹವಾಗಿದೆ. ಇಂತಹ ಶುದ್ಧ ನೀರಿನಲ್ಲಿ ಕುರಿ, ಮೇಕೆಗಳಿಗೆ ರೋಗ ಹರಡುವ ಸೊಳ್ಳೆಗಿಂತ ಸ್ವಲ್ಪ ದಪ್ಪನಾದ ನೊಣ(ಕುರುಡು ನೊಣ) ಬೆಳವಣಿಗೆಯಾಗುತ್ತವೆ. ಈ ಕುರುಡು ನೊಣಗಳು ನಿಂತ ನೀರಿನಲ್ಲಿ ಸಂತಾನೋತ್ಪತ್ತಿ ಹೆಚ್ಚಿಸಿಕೊಳ್ಳುತ್ತಾ ಸಾಗುತ್ತವೆ. ಇವು ಕಚ್ಚುವುದರಿಂದ ಕುರಿ, ಮೇಕೆಗಳಿಗೆ ನೀಲಿ ನಾಲಿಗೆ ರೋಗ ರೋಗ ಹರಡುತ್ತದೆ.