ತುಮಕೂರು:ಲಾರಿ ಕಳವು ಮಾಡುತ್ತಿದ್ದ ಮೂವರು ಅಂತರರಾಜ್ಯ ಕಳ್ಳರನ್ನು ಬಂಧಿಸಿರುವ ಶಿರಾ ಪೊಲೀಸರು ಲಾರಿಯೊಂದನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಮಣಿಕಂಠನ್, ಮನೋಜ್ ತಿರಕಿ, ಪಳನಿಸ್ವಾಮಿ ಬಂಧಿತ ಆರೋಪಿಗಳು. ಇವರು ಸಂತೆಪೇಟೆಯ ನಾಗರಾಜು ಎಂಬುವರಿಗೆ ಸೇರಿದ ಸುಮಾರು 11 ಲಕ್ಷ ರೂ. ಮೌಲ್ಯದ ಲಾರಿಯನ್ನು 2020ರ ಫೆಬ್ರವರಿ 23ರಂದು ಕಳವು ಮಾಡಿದ್ದರು. ಈ ಸಂಬಂಧ ಶಿರಾ ನಗರ ಪೊಲೀಸ್ ಠಾಣೆಗೆ ನಾಗರಾಜು ದೂರು ನೀಡಿದ್ದರು.
ಆರೋಪಿಗಳು ಲಾರಿಯನ್ನು ತಮಿಳುನಾಡಿನ ಸೇಲಂನಲ್ಲಿ ಪಳನಿಸ್ವಾಮಿ ಮತ್ತು ಸೆಂತಿಲ್ ನಾಥನ್ ಎಂಬುವರಿಗೆ ಮಾರಾಟ ಮಾಡಿದ್ದರು. ಬಳಿಕ ಇವರು ಪ್ರಸಾದ್ ಮತ್ತು ಭಾಷಾ ಎಂಬುವರಿಗೆ ಮಾರಾಟ ಮಾಡಿದ್ದರು.
ಪ್ರಸಾದ್ ಮತ್ತು ಭಾಷಾ ಲಾರಿ ಎಂಜಿನ್ ನಂಬರ್, ಚಾರ್ಸಿ ನಂಬರ್ ಹಾಗೂ ಆರ್ಸಿ ನಂಬರ್ ಬದಲಿಸಿ ಬೇರೆ ವಾಹನದ ಆರ್ಸಿ ನಂಬರ್, ವಾಹನ ಸಂಖ್ಯೆ ಬದಲಿಸಿದ್ದಾರೆ. ಇಷ್ಟಾದ ಬಳಿಕ ತಮಿಳುನಾಡಿನ ವೇಲೂರು ಜಿಲ್ಲೆಯ ತಂಡಲಂ ಕೃಷ್ಣಪುರಂ ಗ್ರಾಮದ ಕುಮಾರ್ ಅವರಿಗೆ 12.60 ಲಕ್ಷ ರೂ.ಗೆ ಮಾರಾಟ ಮಾಡಿದ್ದರು. ಈ ಸಂಬಂಧ ಮಾಹಿತಿ ಕಲೆ ಹಾಕಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.