ತುಮಕೂರು: ಗ್ರಾಹಕರಿಗೆ ಗೊತ್ತಿಲ್ಲದೆಯೇ ಎಟಿಎಂಗಳಿಂದ ಹಣ ಡ್ರಾ ಮಾಡುತ್ತಿರುವ ಜಾಲವೊಂದು ಜಿಲ್ಲೆಯಲ್ಲಿ ಕಾರ್ಯನಿರತವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಬರೋಬ್ಬರಿ 52 ಪ್ರಕರಣಗಳು ದಾಖಲಾಗಿವೆ.
ತುಮಕೂರಿನಲ್ಲಿ ಹೆಚ್ಚುತ್ತಿದೆ ಎಟಿಎಂಗಳಿಂದ ಹಣ ಡ್ರಾ ಮಾಡಿಕೊಳ್ಳುತ್ತಿರುವ ಗ್ಯಾಂಗ್ನ ಕರಾಮತ್ತು ಹೌದು, ತಮಗೆ ಅರಿವಿಲ್ಲದಂತೆಯೇ ತಮ್ಮ ಖಾತೆಯಲ್ಲಿನ ಹಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಎಟಿಎಂ ಕಾರ್ಡ್ ಬಳಿ ಇದ್ದರೂ ಖಾತೆಯಿಂದ ಹಣವನ್ನು ಖದೀಮರು ಡ್ರಾ ಮಾಡುತ್ತಿದ್ದಾರೆ. ಯಾವುದೇ ರೀತಿಯ ಫೋನ್ ಕರೆ, ಒಟಿಪಿ ಶೇರ್ ಮಾಡದೇ ಇದ್ದರೂ ಖಾತೆಯಲ್ಲಿನ ಹಣ ಡ್ರಾ ಮಾಡುತ್ತಿದ್ದಾರೆ. ಅದರಲ್ಲೂ ತಮಿಳುನಾಡಿನ ಎಟಿಎಂಗಳಲ್ಲಿ ಹೆಚ್ಚಿನ ಹಣ ಡ್ರಾ ಆಗುತ್ತಿರೋದು ಗಮನಾರ್ಹವಾಗಿದೆ.
ಕಳೆದ ಮಾರ್ಚ್‌ನಲ್ಲಿ ಸ್ಕಿಮ್ಮಿಂಗ್ ಸಾಧನದ ಮೂಲಕ ಎಟಿಎಂ ಕಾರ್ಡ್‌ಗಳ ದತ್ತಾಂಶವನ್ನು ಕದ್ದು ಗ್ರಾಹಕರ ಖಾತೆಯಿಂದ ಹಣ ಡ್ರಾ ಮಾಡಿಕೊಳ್ಳುತ್ತಿದ್ದವರ ಜಾಲವನ್ನು ತುಮಕೂರು ಪೊಲೀಸರು ಭೇದಿಸಿದ್ದರು. ತುಮಕೂರು ನಗರದಲ್ಲಿ ಎಟಿಎಂಗಳಲ್ಲಿ ಸ್ಕಿಮ್ಮಿಂಗ್ ಮಷಿನ್ ಅಳವಡಿಸಿ ವಂಚಿಸುತ್ತಿದ್ದ ಉತ್ತರ ಪ್ರದೇಶದ ಇಬ್ಬರನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದರು. ಈಗ ಮತ್ತೆ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಕಂಡು ಬರುತ್ತಿದ್ದು, ಗ್ರಾಹಕರ ನಿದ್ದೆಗೆಡಿಸಿದೆ.
ಎಟಿಎಂನಲ್ಲಿ ಹಣ ಪಡೆಯಲು ಗ್ರಾಹಕರು ಕಾರ್ಡ್ ಸ್ವೈಪ್ ಮಾಡಿದಾಗ ಆ ಕಾರ್ಡ್ ನಂಬರ್ ಸ್ಕಿಮ್ಮಿಂಗ್ ಸಾಧನದಲ್ಲಿ ಸಂಗ್ರಹವಾಗುತ್ತದೆ. ನಂತರ ವಂಚಕರು ಸ್ಕಿಮ್ಮಿಂಗ್ ಸಾಧನವನ್ನು ಕೊಂಡೊಯ್ದು ನಕಲಿ ಕಾರ್ಡ್‌ಗಳನ್ನು ಬಳಸಿ ಹಣ ಡ್ರಾ ಮಾಡಿಕೊಳ್ಳುತ್ತಿದ್ದಾರೆ. ಈ ಕುರಿತು ತುಮಕೂರು, ಗುಬ್ಬಿ, ಕುಣಿಗಲ್, ಕೆ.ಬಿ. ಕ್ರಾಸ್ ಪೊಲೀಸ್ ಠಾಣೆಯಲ್ಲಿ 52 ಪ್ರಕರಣಗಳು ದಾಖಲಾಗಿವೆ.
ಈಗಾಗಲೇ ಒಟ್ಟು 15ರಿಂದ 20 ಲಕ್ಷ ರೂ. ಹಣ ಲಪಟಾಯಿಸಲಾಗಿದೆ. ಈ ರೀತಿ ಹಣ ಡ್ರಾ ಮಾಡುತ್ತಿರುವುದು ಬಹುತೇಕ ತಮಿಳುನಾಡಿನಲ್ಲಿ ಆಗಿರುವುದರಿಂದ ಈ ಕೃತ್ಯ ಎಸಗುತ್ತಿರುವವರೆಲ್ಲಾ ತಮಿಳುನಾಡು ಮೂಲದ ವಂಚಕರು ಎಂದು ಪೊಲೀಸರು ಶಂಕಿಸಿದ್ದಾರೆ. ಕುಣಿಗಲ್‌ನ ಶಿವಕುಮಾರ್ ಎಂಬುವರ ಖಾತೆಯಿಂದ 8,500 ರೂ. ಹಣ ತಮಿಳುನಾಡಿನ ಗುಡುವಚ್ಚೇರಿ ಕಾಂಚಿಪುರಂನ ಎಟಿಎಂ ಕೇಂದ್ರದಲ್ಲಿ ಡ್ರಾ ಆಗಿದೆ. ಗುಬ್ಬಿಯ ಮಹೇಶ್ ಎಂಬುವರ ಖಾತೆಯಿಂದ 5,000 ಡ್ರಾ ಆಗಿದೆ. ಹೀಗೆ ಹಲವು ಮಂದಿ ಹಣ ಕಳೆದುಕೊಂಡು, ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.