ತುಮಕೂರು:ಸಾಮಾನ್ಯವಾಗಿ ಹೆಚ್ಐವಿ ಪೀಡಿತರು ಒಮ್ಮೆ ಈ ಮಾರಕ ಸೋಂಕಿಗೆ ತುತ್ತಾದರೆ ಹೆಚ್ಚು ದಿನಗಳ ಕಾಲ ಬದುಕುವುದಿಲ್ಲ ಎಂಬ ತಪ್ಪು ಕಲ್ಪನೆಗಳಿವೆ. ಆದರೆ ಕಲ್ಪತರು ನಾಡಿನಲ್ಲಿ 15 ವರ್ಷಗಳಿಂದ 3,500 ಹೆಚ್ಐವಿ ಪೀಡಿತರು ಸಾವನ್ನೇ ಗೆದ್ದಿದ್ದಾರೆ...!
ಹೌದು, ಅಚ್ಚರಿಯಾದ್ರೂ ಇದು ಸತ್ಯ. ಇವರೆಲ್ಲಾ ಚಿಕಿತ್ಸೆ ಮೂಲಕ ಆರೋಗ್ಯವಂತರಾಗಿ ದೈನಂದಿನ ಬದುಕಿನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 2001ರಿಂದ ಜಿಲ್ಲೆಯಲ್ಲಿ ಇಲ್ಲಿಯವರೆಗೆ 8 ಲಕ್ಷ ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅದರಲ್ಲಿ 16,024 ಜನ ಹೆಚ್ಐವಿ ಪೀಡಿತರು ಎಂದು ಗುರುತಿಸಲಾಗಿದೆ. 2008ರಿಂದ ಈ ಸೋಂಕಿಗೆ ತುಮಕೂರು ನಗರದಲ್ಲಿ ಆರಂಭವಾದ ಎಆರ್ಟಿ ಸೆಂಟರ್ನಿಂದ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆ ಪಡೆಯಲು ಅಂದಿನಿಂದ ಇದುವರೆಗೂ 12 ಸಾವಿರ ಜನ ಹೆಚ್ಐವಿ ಪೀಡಿತರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಅದರಲ್ಲಿ 3,410 ಜನ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 6762 ಮಂದಿ ಇಂದಿಗೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿ 3500 ಜನ ಕಳೆದ 15 ವರ್ಷಗಳಿಂದ ಆರೋಗ್ಯವಂತರಾಗಿ ಬದುಕು ಸಾಗಿಸುತ್ತಿದ್ದಾರೆ.
ಸಾವನ್ನೇ ಗೆದ್ದರು ಕಲ್ಪತರು ನಾಡಿನ 3,500 ಮಂದಿ! ತುಮಕೂರು ನಗರ ವ್ಯಾಪ್ತಿ, ಗುಬ್ಬಿ ಮತ್ತು ಶಿರಾ ತಾಲೂಕಿನಲ್ಲಿ ಅತಿ ಹೆಚ್ಚು ಹೆಚ್ಐವಿ ಪೀಡಿತರಿದ್ದಾರೆ. ಗುಬ್ಬಿ ತಾಲೂಕಿನಲ್ಲಿ ಮುಂಬೈಗೆ ಉದ್ಯೋಗ ಅರಸಿ ಹೋಗಿದ್ದ ಒಂದಷ್ಟು ಮಂದಿ ವಾಪಸ್ ಬಂದು ಇಲ್ಲಿ ನೆಲೆಸಿದ್ದಾರೆ. ಅವರಲ್ಲಿ ಹೆಚ್ಐವಿ ಪಾಸಿಟಿವ್ ಕಂಡುಬಂದಿದೆ. ಅದಲ್ಲದೆ ಗುಬ್ಬಿ ಮತ್ತು ಚಿಕ್ಕನಾಯಕನಹಳ್ಳಿ ತಾಲೂಕಿನ ಗಡಿ ಭಾಗದಲ್ಲಿ ಗಣಿಗಾರಿಕೆ ನಡೆಯುತ್ತಿದ್ದ ವೇಳೆ ಅಲ್ಲಿ ಕೆಲಸಕ್ಕೆ ಹೊರರಾಜ್ಯದಿಂದ ಬಂದಂತಹ ಕಾರ್ಮಿಕರ ಸಂಖ್ಯೆ ಹೆಚ್ಚಾಗಿತ್ತು. ಇದಲ್ಲದೆ ಲೈಂಗಿಕ ಕಾರ್ಯಕರ್ತರ ಸಂಖ್ಯೆ ಕೂಡ ಹೆಚ್ಚಳವಾಗಿತ್ತು. ಹೀಗಾಗಿ ಗುಬ್ಬಿ ತಾಲೂಕಲ್ಲಿ ಹೆಚ್ಚಿನ ಪ್ರಮಾಣದ ಹೆಚ್ಐವಿ ಸೋಂಕಿತರು ಇರುವುದು ದಾಖಲೆ ಮೂಲಕ ಬಹಿರಂಗವಾಗಿದೆ.
ಇನ್ನು ಕಳೆದ ಆರು ವರ್ಷಗಳಿಂದ ಜಿಲ್ಲೆಯಲ್ಲಿ ಹೆಚ್ಐವಿ ಪೀಡಿತರ ಸಂಖ್ಯೆ ಇಳಿಮುಖವಾಗುತ್ತಿದೆ. ರೋಗಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ಪ್ರಮಾಣದಲ್ಲಿ ಜನರಲ್ಲಿ ಜಾಗೃತಿ ಮೂಡುತ್ತಿದೆ. ಸುರಕ್ಷಿತ ಲೈಂಗಿಕತೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಅಲ್ಲದೆ ಆರ್ಥಿಕವಾಗಿ ಸದೃಢವಾಗಲು ಲೈಂಗಿಕ ಕಾರ್ಯಕರ್ತರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ. ಹೆಚ್ಐವಿ ಪೀಡಿತ ಮಕ್ಕಳಿಗೂ ಕೂಡ ಪ್ರತಿ ತಿಂಗಳು ಸರ್ಕಾರದಿಂದ ಸಹಾಯಧನ ನೀಡಲಾಗುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಹೆಚ್ಐವಿ ಪೀಡಿತರ ಸಂಖ್ಯೆ ಕೂಡ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ ಎನ್ನುತ್ತಾರೆ ಎಆರ್ಟಿ ಸೆಂಟರ್ ಮುಖ್ಯಸ್ಥ ಡಾ. ಸನತ್.
ಒಟ್ಟಾರೆ ತುಮಕೂರು ಜಿಲ್ಲೆಯಲ್ಲಿ ಬಯಲು ಸೀಮೆ ಪ್ರದೇಶದ ಕೂಲಿ ಕಾರ್ಮಿಕರು ಕೆಲಸಕ್ಕೆಂದು ದೂರದ ಊರಿಗೆ ತೆರಳಿ, ವಾಪಸ್ ಬರುವ ವೇಳೆಗೆ ಮಾರಕ ಸೋಂಕಿಗೆ ತುತ್ತಾಗುತ್ತಿದ್ದಾರೆ. ಸುರಕ್ಷಿತ ಲೈಂಗಿಕ ವಿಧಾನದ ಬಗ್ಗೆ ತಿಳಿದುಕೊಂಡರೆ ಹೆಚ್ಐವಿಯಿಂದ ದೂರ ಇರಬಹುದು ಅನ್ನೋದು ವೈದ್ಯರ ಸಲಹೆಯಾಗಿದೆ.