ತುಮಕೂರು: ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ತುಂಬಾಡಿ ಹೊಸಕೆರೆ ಕೋಡಿ ನೀರಿನಲ್ಲಿ (Tumbadi lake) ಕೊಚ್ಚಿ ಹೋಗುತ್ತಿದ್ದ ಮೂವರನ್ನು ಸ್ಥಳೀಯ ಯುವಕರ ತಂಡ ತಮ್ಮ ಪ್ರಾಣದ ಹಂಗು ತೊರೆದು ಹಗ್ಗದ ಸಹಾಯದಿಂದ ನೀರಿಗಿಳಿದು ರಕ್ಷಿಸಿದರು.
ನೀರಿನ ಪ್ರಮಾಣ ಅರಿಯದೇ ಕೊರಟಗೆರೆ ತಾಲೂಕಿನ ಸೀಗೆಪಾಳ್ಯದ ಮಂದಿ ಸೇತುವೆ ದಾಟಲು ಪ್ರಯತ್ನಿಸಿದ್ದಾರೆ. ತಂದೆಯ ಜೊತೆಯಲ್ಲಿದ್ದ ಇಬ್ಬರು ಹೆಣ್ಣುಮಕ್ಕಳು ನೀರಿನ ರಭಸಕ್ಕೆ ಸೇತುವೆಯಿಂದ ಕೆಳಗೆ ಬಿದ್ದು ಕೊಚ್ಚಿ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಹಿಂಬದಿಯಿಂದ ಬರುತ್ತಿದ್ದ ಯುವಕ ರಕ್ಷಣೆಗೆ ಕೆರೆಗೆ ಧುಮುಕಿದ್ದಾನೆ.
ತುಂಬಾಡಿ ಗ್ರಾಮದ ರಾಜಣ್ಣ, ರಂಗನಾಥ, ನಟರಾಜು, ಅರುಣ್ ಹಾಗೂ ಸಂತೋಷ್ ಸೇರಿದಂತೆ ಸ್ಥಳೀಯರು ನೀರಿಗಿಳಿದು ಪ್ರಾಣಾಪಾಯದಲ್ಲಿದ್ದ ಮೂವರನ್ನು ತಡೆದು ಹಗ್ಗದ ಸಹಾಯದಿಂದ ರಕ್ಷಿಸಿದರು.
ಇದನ್ನೂ ಓದಿ:ಮೈಸೂರು: ಚಿರತೆ ದಾಳಿಯಿಂದ ರೈತನಿಗೆ ಗಂಭೀರ ಗಾಯ
ಕೊರಟಗೆರೆ ಕಸಬಾ ಹೋಬಳಿ ವ್ಯಾಪ್ತಿಯ ತುಂಬಾಡಿ ಹೊಸಕೆರೆ ಕೋಡಿ ನೀರಿನ ಸೊಬಗು ಪ್ರತಿನಿತ್ಯ ಪ್ರವಾಸಿಗರ, ಸ್ಥಳೀಯರ ಕಣ್ಮನ ಸೆಳೆಯುತ್ತಿದೆ. ಗ್ರಾಮೀಣ ಪ್ರದೇಶದ ಯುವಕರ ದಂಡೇ ತುಂಬಾಡಿ ಕೆರೆಯ ಸೌಂದರ್ಯ ಕಣ್ತುಂಬಿಕೊಳ್ಳಲು ಆಗಮಿಸುತ್ತಾರೆ. ಆದ್ರೆ ಮಳೆರಾಯನ ಆರ್ಭಟದಿಂದ ಕೆರೆ ನೀರಿನ ಹೊರಹರಿವಿನ ಪ್ರಮಾಣ ಹೆಚ್ಚಾಗಿದೆ. ಕೋಡಿಯ ನೀರು ರಭಸವಾಗಿ ಹರಿಯುತ್ತಿದೆ. ಕೆರೆಯನ್ನು ನೋಡಲು ಸೇತುವೆಯನ್ನು ದಾಟಿ ಹೋಗಬೇಕಿದೆ. ಸೇತುವೆಯ ಮೇಲೆ ನೀರು ರಭಸವಾಗಿ ಹರಿಯುತ್ತಿದ್ದು ಅಪಾಯ ಹೆಚ್ಚಿದೆ.