ತುಮಕೂರು: ಎರಡು ವರ್ಷಗಳಿಂದ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸುತ್ತಿದ್ದ ಚಾಲಾಕಿ ಅಪ್ಪ-ಮಗನ ಮನೆಗಳ್ಳತನ ಪ್ರಕರಣ ಬೇಧಿಸುವಲ್ಲಿ ತುಮಕೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳ್ಳತನ ಭೇದಿಸುವಲ್ಲಿ ಯಶಸ್ವಿಯಾದ ತಂಡ ಚಿತ್ರದುರ್ಗದ ಚೋಳಗುಡ್ಡದ ಮಂಜಪ್ಪ ಮತ್ತು ಆತನ ಮಗ ಸೋಮಶೇಖರ್ ಮನೆಗಳ್ಳನ ಮಾಡುತ್ತಿದ್ದವರು ಎಂದು ಪತ್ತೆಯಾಗಿದೆ. 2017ರ ಜುಲೈ 24ರಂದು ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಗ್ರಾಮದ ಕೃಷ್ಣಾಚಾರ್ ಎಂಬುವರ ಮನೆ ಕಳ್ಳತನವಾಗಿತ್ತು. ಮನೆ ಬೀಗ ಒಡೆದು ಬೀರುವಿನಲ್ಲಿದ್ದ 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಲಾಗಿತ್ತು.
ಈ ಸಂಬಂಧ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸತತ ಪ್ರಯತ್ನದ ನಂತರವೂ ಪೊಲೀಸರಿಗೆ ಪ್ರಕರಣ ಬೇಧಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ಆರೋಪಿ ಮತ್ತು ಮಾಲು ಪತ್ತೆಯಾಗದ ಕಾರಣ ನ್ಯಾಯಾಲಯಕ್ಕೆ ಪೊಲೀಸರು ವರದಿ ಸಲ್ಲಿಸಿದ್ದರು. ಈ ಪ್ರಕರಣ ಕುರಿತಂತೆ ಹಲವು ಬಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕ್ರೈಂ ಸಭೆಯಲ್ಲಿ ಚರ್ಚಿಸಲಾಗಿತ್ತು.
ಆಕಸ್ಮಿಕ ಬೆರಳಚ್ಚಿನ ಮೂಲಕ ಬೆಳಕಿಗೆ ಬಂತು ಅಪ್ಪ-ಮಗನ ಕಳ್ಳಾಟ...
ಬೆರಳಚ್ಚು ತಜ್ಞರಿಗೆ ಕೃತ್ಯ ನಡೆದ ಸ್ಥಳದಲ್ಲಿ ದೊರೆತ ಆಕಸ್ಮಿಕ ಬೆರಳಚ್ಚು ಎರಡು ವರ್ಷಗಳ ಹಳೆಯ ಪ್ರಕರಣವನ್ನು ಬೇಧಿಸುವಲ್ಲಿ ಸಹಕಾರಿಯಾಗಿದೆ. ಆ ಬೆರಳಚ್ಚನ್ನು ನೂತನ ಎಎಫ್ಐಎಸ್ ತಂತ್ರಾಂಶದಲ್ಲಿ ಮರು ಶೋಧಿಸಲಾಗಿತ್ತು. ಇದು ಈ ಹಿಂದೆ ಇದೇ ಪ್ರಕರಣದ ಅನುಮಾನಿತ ಆರೋಪಿಯಾಗಿದ್ದ ಸೋಮಶೇಖರ್ ಎಂಬಾತನದ್ದು ಎಂಬುದು ಸ್ಪಷ್ಟವಾಗಿದೆ.
ಈ ಪ್ರಕರಣದಲ್ಲಿ ಆರೋಪಿ ಸೋಮಶೇಖರ್ನನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಸತತ ವಿಚಾರಣೆ ನಡೆಸಿದ್ದಾರೆ. ಆಗ ಆತ ತನ್ನ ತಂದೆ ಮಂಜಪ್ಪನಿಗೆ ಚಿನ್ನಾಭರಣವನ್ನು ಕೊಟ್ಟಿರುವುದಾಗಿ ಒಪ್ಪಿಕೊಂಡಿದ್ದಾನೆ. ಇಬ್ಬರೂ ಸೇರಿ ಚಿತ್ರದುರ್ಗ ನಗರದ ಶಿಕ್ಷಕನೊಬ್ಬನ ಮೂಲಕ ಚಿತ್ರದುರ್ಗ ನಗರದ ಮಣಪ್ಪುರಂ ಫೈನಾನ್ಸ್, ಪ್ರಗತಿ ಗ್ರಾಮೀಣ ಬ್ಯಾಂಕ್ನಲ್ಲಿ ಚಿನ್ನಾಭರಣಗಳನ್ನು ಅಡ ಇರಿಸಿದ್ದರು ಹಾಗೂ ಜ್ಯುಯಲರ್ಸ್ಗೆ ಮಾರಾಟ ಮಾಡಿದ್ದರಂತೆ. ಪೊಲೀಸರು 20 ಲಕ್ಷ ರೂಪಾಯಿ ಮೌಲ್ಯದ 576 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ. ಮಂಜಪ್ಪ ಈಗಾಗಲೇ ಬೇರೊಂದು ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ.