ತುಮಕೂರು:ಜಿಲ್ಲೆಯಲ್ಲಿ ಕಳೆದ 10 ದಿನಗಳಿಂದೀಚೆಗೆ ಒಟ್ಟು 100 ಮಂದಿ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದ್ದು, ಅವರೆಲ್ಲರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೊರಟಗೆರೆ ಸರ್ಕಾರಿ ಶಾಲೆಯ 26 ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ. ಮಧುಗಿರಿಯಲ್ಲಿ ನರ್ಸಿಂಗ್ ಕಾಲೇಜಿನ 25 ವಿದ್ಯಾರ್ಥಿಗಳಲ್ಲೂ ಸೋಂಕು ಕಾಣಿಸಿಕೊಂಡಿದೆ. ಯಾರಿಗೂ ಗಂಭೀರವಾದ ಲಕ್ಷಣ ಕಂಡುಬಂದಿಲ್ಲ. ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಯಾವ ವಿದ್ಯಾರ್ಥಿಯೂ ಆಸ್ಪತ್ರೆಗೆ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.
ಕೊರಟಗೆರೆ ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ಕೊರೊನಾ ಪರೀಕ್ಷೆ ಮಾಡಿದಾಗ ಅದರಲ್ಲಿ 26 ಮಕ್ಕಳು ಸೋಂಕಿತರಾಗಿದ್ದು ಕಂಡು ಬಂದಿದೆ. ಅಲ್ಲದೆ ಶಾಲೆಯ ಶಿಕ್ಷಕರೊಬ್ಬರು ಸಹ ಸೋಂಕಿಗೆ ತುತ್ತಾಗಿದ್ದಾರೆ. ವಿದ್ಯಾರ್ಥಿಗಳನ್ನು ಕ್ವಾರಂಟೈನ್ ಮಾಡಲಾಗಿದೆ.
ತುಮಕೂರು ನಗರದ ನರ್ಸಿಂಗ್ ಕಾಲೇಜುಗಳ ಕೇರಳ ಮೂಲದ 18 ವಿದ್ಯಾರ್ಥಿಗಳು ಸೋಂಕಿಗೆ ಒಳಗಾಗಿದ್ದಾರೆ. ಇವರೆಲ್ಲರೂ ಇತ್ತೀಚೆಗೆ ಕೇರಳದಿಂದ ಬಂದಿದ್ದು, ಪರೀಕ್ಷೆ ವೇಳೆ ಸೋಂಕು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.