ಶಿವಮೊಗ್ಗ:ಪ್ರತಿವರ್ಷ ಆ.12ರ ವಿಶ್ವ ಆನೆಗಳ ದಿನಾಚರಣೆಯಂದು ಶಿವಮೊಗ್ಗದ ಸಕ್ರೇಬೈಲು ಆನೆ ಬಿಡಾರದಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಿರುತ್ತಿತ್ತು. ಸಾವಿರಾರು ಪ್ರವಾಸಿಗರ ನಡುವೆ ನಡೆಯುತ್ತಿದ್ದ ಆನೆಗಳ ದಿನಾಚರಣೆಯ ಮನೋರಂಜನಾ ಕ್ರೀಡಾಕೂಟ ಎಲ್ಲರ ಮನಸೂರೆಗೊಳ್ಳುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣಕ್ಕಾಗಿ ಆನೆಗಳ ಕ್ರೀಡಾಕೂಟ ರದ್ದಾಗುತ್ತಿದೆ. ಹೀಗಾಗಿ ಈ ಬಾರಿಯ ವಿಶ್ವ ಆನೆಗಳ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.
ರಾಜ್ಯದ ಎರಡನೇ ಅತಿದೊಡ್ಡ ಆನೆ ಬಿಡಾರ ಎನಿಸಿಕೊಂಡಿರುವ ಶಿವಮೊಗ್ಗದ ಗಾಜನೂರು ಬಳಿಯಿರುವ ಸಕ್ರೇಬೈಲು ಆನೆ ಕ್ಯಾಂಪ್ನಲ್ಲಿ ಪ್ರತಿವರ್ಷ ವಿಶ್ವ ಆನೆಗಳ ದಿನಾಚರಣೆಯಂದು ಆನೆಗಳ ಕ್ರೀಡಾಕೂಟ ನಡೆಸಲಾಗುತ್ತಿತ್ತು. ವನ್ಯಜೀವಿ ಅರಣ್ಯ ವಿಭಾಗದಿಂದ ನಡೆಸುತ್ತಿದ್ದ ಈ ಕ್ರೀಡಾಕೂಟದಲ್ಲಿ ಆನೆಗಳಿಗೆ ವಿವಿಧ ಆಟೋಟ ಹಾಗೂ ತಿನ್ನುವ ಸ್ಫರ್ಧೆಯನ್ನು ಆಯೋಜಿಸಲಾಗುತ್ತಿತ್ತು. ಇದಕ್ಕಾಗಿ ಆನೆಗಳಿಗೆ ತರಬೇತಿ ಸಹ ನೀಡಲಾಗುತ್ತಿತ್ತು. ಆದರೆ ಕಳೆದ ಎರಡು ವರ್ಷದಿಂದ ಕೋವಿಡ್ ಕಾರಣಕ್ಕಾಗಿ ಕ್ರೀಡಾಕೂಟವನ್ನು ರದ್ದುಮಾಡಿದ್ದು, ಆನೆಗಳಿಗೆ ಪೂಜೆ ಸಲ್ಲಿಸುವ ಮೂಲಕ ಸರಳವಾಗಿ ಆಚರಿಸಲಾಗಿದೆ.