ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ಹಾಗೂ ಹೊಸನಗರಗಳಲ್ಲಿ ಕಳೆದ ಹಲವು ದಿನಗಳಿಂದ ಕಾಡಾನೆ ಹಾವಳಿ ಹೆಚ್ಚಿದೆ. ಭದ್ರಾ ಅಭಯಾರಣ್ಯದಿಂದ ತುಂಗಾ ನದಿ ದಾಟಿ ಶಿವಮೊಗ್ಗ ಜಿಲ್ಲೆಗೆ ಲಗ್ಗೆಯಿಡುವ ಕಾಡಾನೆಗಳು ಅಡಿಕೆ ತೋಟ, ಬೆಳೆಗಳನ್ನು ಧ್ವಂಸಗೊಳಿಸುತ್ತಿವೆ. ಪರಿಣಾಮ, ಫಸಲಿಗೆ ಬಂದಿರುವ ಬೆಳೆ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ರೈತರು.
ಬೇಸಿಗೆ ಆರಂಭವಾಗಿರುವುದರಿಂದ ಆನೆಗಳಿಗೆ ಕಾಡಿನಲ್ಲಿ ಸಮರ್ಪಕ ಆಹಾರ ಸಿಗುತ್ತಿಲ್ಲ. ಹೀಗಾಗಿ ಕಾಡಿಗೆ ಹೊಂದಿಕೊಂಡಂತಿರುವ ಅಡಿಕೆ ತೋಟಗಳಿಗೆ ಅವು ದಾಂಗುಡಿ ಇಡುತ್ತಿವೆ. ಈಗಾಗಲೇ ಅಪಾರ ಪ್ರಮಾಣದ ಅಡಿಕೆ ಮರಗಳು ನೆಲಸಮವಾಗಿದೆ. ತೀರ್ಥಹಳ್ಳಿ ತಾಲೂಕಿನ ತಳಲೆ, ಕೀಗಡಿ ಭಾಗ ಹಾಗೂ ಹೊಸನಗರ ತಾಲೂಕಿನ ಬೆಳ್ಳೂರು ಹಾಗೂ ತಳಲೆ ಭಾಗದಲ್ಲಿ ಮೂರು ಕಾಡಾನೆಗಳಿವೆ ಎನ್ನಲಾಗುತ್ತಿದೆ.
ಅಡಿಕೆ ಮರಗಳ ನಾಶ: ತೀರ್ಥಹಳ್ಳಿ ತಾಲೂಕಿನ ಕೀಗಡಿ ಗ್ರಾಮದಿಂದ ಹೊಸನಗರ ತಾಲೂಕಿನ ತಳಲೆ ಗ್ರಾಮದವರೆಗೆ ದಟ್ಟ ಅರಣ್ಯ ಪ್ರದೇಶವಿದೆ. ಇಲ್ಲಿ ವಾಸ್ತವ್ಯ ಕಂಡುಕೊಂಡಿರುವ ಕಾಡಾನೆಗಳು ರಾತ್ರಿ ವೇಳೆ ತಮ್ಮ ಆಹಾರಕ್ಕಾಗಿ ರೈತರ ತೋಟಗಳತ್ತ ಬರುತ್ತಿವೆ. ಮಧ್ಯರಾತ್ರಿಯ ವೇಳೆಗೆ ತೋಟಗಳ ಮೇಲೆ ದಾಳಿ ನಡೆಸುತ್ತಿದ್ದು ಇನ್ನೇನು ಫಸಲು ಬರಲಾರಂಭಿಸಿವೆ ಎನ್ನುವಂತಹ ಐದಾರು ವರ್ಷದ ಅಡಿಕೆ ಮರಗಳನ್ನು ಧರೆಗುರುಳಿಸಿ ತಿನ್ನುತ್ತಿವೆ. ಬೆಳಗಾಗುವುದರೊಳಗೆ ಮತ್ತೆ ಆನೆಗಳು ಕಾಡಿನೊಳಗೆ ಹೋಗುತ್ತಿವೆ. ಸಂಜೆ ತೋಟದಿಂದ ಮನೆಗೆ ಬಂದ ರೈತರು ಬೆಳಗ್ಗೆದ್ದು ತೋಟಕ್ಕೆ ಹೋದಾಗ ಅಡಕೆ ಮರಗಳು ನೆಲ್ಲಕ್ಕುರುಳಿರುವುದನ್ನು ನೋಡಿ ಕಣ್ಣೀರು ಹಾಕುವ ಸ್ಥಿತಿ ನಿರ್ಮಾಣವಾಗಿದೆ.