ಶಿವಮೊಗ್ಗ:ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ಆರೋಪಿಗಳು ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಆದರೆ, ಅವರಿಗೆ ಜೈಲ್ನಲ್ಲಿ ರಾಜಾತಿಥ್ಯ ಸಿಗುತ್ತಿದೆಯೇ ಎಂಬ ಅನುಮಾನಗಳು ಕಾಡುತ್ತಿದೆ. ಕಾರಣ ಆರೋಪಿಗಳ ಕೈಗೆ ಮೊಬೈಲ್ ಸಿಕ್ಕಿದ್ದು, ಅವರು ವಿಡಿಯೋ ಕರೆ ಮಾಡಿರುವ ಸ್ಕ್ರೀನ್ ರೆಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಹರ್ಷ ಹತ್ಯೆಯಾದ ಬಳಿಕ ಇಡೀ ಶಿವಮೊಗ್ಗ ನಗರವೇ ಹೊತ್ತಿ ಉರಿದಿತ್ತು. ಪರಿಸ್ಥಿತಿಯ ಗಂಭೀರತೆ ಅರಿತ ಪೊಲೀಸರು ಹತ್ಯೆ ನಡೆದ ಒಂದು ದಿನದ ಒಳಗಾಗಿ ಹತ್ಯೆ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದರು. ಹರ್ಷನ ಕೊಲೆ ಪ್ರಕರಣದ ಬಗ್ಗೆ ಎನ್ಐಎ ತೀರ್ವವಾಗಿ ತನಿಖೆ ಮಾಡುತ್ತಿದೆ. ಈ ಸಂದರ್ಭದಲ್ಲಿ ಆರೋಪಿಗಳಿಗೆ ಮೊಬೈಲ್ ಸಿಕ್ಕಿರುವುದಾದರೂ ಹೇಗೆ ಎಂಬ ಅನುಮಾನ ಹುಟ್ಟಿಕೊಂಡಿದೆ.
ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಮಾಡಿದ ಆರೋಪಿಗೆ ಜೈಲಿನಲ್ಲಿ ರಾಜಾತಿಥ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋಗಳು ಹರಿದಾಡುತ್ತಿದ್ದಂತೆ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ಸಂಬಂಧ ಜೈಲು ಸಿಬ್ಬಂದಿ ಮೇಲೆ ಪ್ರಕರಣ ದಾಖಲಾಗಿದೆ ಎನ್ನಲಾಗುತ್ತಿದೆ. ಆದರೆ, ಎನ್ಐಎ ತನಿಖೆ ನಡೆಸುವ ವೇಳೆಯಲ್ಲಿ ಆರೋಪಿಗಳ ಕೈಗೆ ಮೊಬೈಲ್ ಕೊಟ್ಟವರು ಯಾರು, ಈ ಆರೋಪಿಗಳು ತಮ್ಮ ಸಂಬಂಧಿಕರು ಮಾತ್ರವಲ್ಲದೇ ಬೇರೆಯವರೊಂದಿಗೆ ಮಾತನಾಡಿರುವ ಸಾಧ್ಯತೆಯೂ ಇದೆ. ಜೊತೆಗೆ ಹರ್ಷ ಹತ್ಯೆ ಪ್ರಕರಣದ ತನಿಖೆಯನ್ನು ದಿಕ್ಕುತಪ್ಪಿಸುವ ಹುನ್ನಾರ ನಡೆಯುತ್ತಿದೆಯೇ ಎಂಬ ಅನುಮಾನವನ್ನು ಹರ್ಷ ಕುಟುಂಬದವರು ವ್ಯಕ್ತಪಡಿಸಿದ್ದಾರೆ.
ಹರ್ಷ ಹತ್ಯೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಎಲ್ಲರೂ ಒತ್ತಾಯಿಸುತ್ತಿರುವ ಸಂದರ್ಭದಲ್ಲೇ ಜೈಲಿನಲ್ಲಿ ಆರೋಪಿಗಳಿಗೆ ರಾಜಾತಿಥ್ಯ ನೀಡುವ ಜೊತೆಗೆ ಎಲ್ಲ ಸವಲತ್ತುಗಳನ್ನು ಒದಗಿಸುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ತಪ್ಪಿತಸ್ಥ ಜೈಲು ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಇದನ್ನೂ ಓದಿ:ಹರ್ಷನ ರಕ್ತಸಿಕ್ತ ಫೋಟೋ ಹಂಚಿಕೊಂಡ ಆರೋಪ: ನಾಲ್ವರು ಬಾಲಕರ ವಿರುದ್ಧ ದೂರು