ಶಿವಮೊಗ್ಗ: ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪ ಅವರನ್ನು ಕೆಳಗಿಳಿಸುವ ವಿಚಾರಕ್ಕೆ ತವರು ಜಿಲ್ಲೆ ಶಿವಮೊಗ್ಗದಲ್ಲಿ ವಿರೋಧ ವ್ಯಕ್ತವಾಗಿದೆ. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದರೆ, ಬಿಜೆಪಿ ಪಕ್ಷಕ್ಕೆ ನಷ್ಟವೇ ಹೊರತು ಯಡಿಯೂರಪ್ಪ ಅವರಿಗಲ್ಲ. ಅವರ ಅಧಿಕಾರವಧಿ ಇನ್ನೂ ಎರಡು ವರ್ಷವಿದೆ. ಅವರಿಗೆ ಅಧಿಕಾರ ಪೂರ್ಣಗೊಳಿಸಲು ಅವಕಾಶ ನೀಡಿ, ಗೌರವಯುತವಾಗಿ ಕಳುಹಿಕೊಡಬೇಕೆಂದು ಅಖಿಲ ಭಾರತ ವೀರಶೈವ ಮಹಾಸಭಾ ಒತ್ತಾಯಿಸಿದೆ.
ಸಿಎಂ ಸ್ಥಾನದಿಂದ ಬಿಎಸ್ವೈ ಕೆಳಗಿಳಿಸುವ ವಿಚಾರ: ವೀರಶೈವ ಮಹಾಸಭಾದಿಂದ ತೀವ್ರ ವಿರೋಧ ಯಡಿಯೂರಪ್ಪ ಬಿಜೆಪಿ ಪಕ್ಷ ಬಿಟ್ಟಾಗ, ಬಿಜೆಪಿಗೆ ನಷ್ಟವಾಗಿದೆ ಎಂಬುದನ್ನು ಬಿಜೆಪಿ ಹೈಕಮಾಂಡ್ ಮರೆಯಬಾರದು. ಕೊರೊನಾಕ್ಕಿಂತ ಮೊದಲೇ ಸಿಎಂ ಬದಲಾವಣೆ ಎನ್ನದೆ, ಕೊರೊನಾವನ್ನು ಹತೋಟಿಗೆ ತಂದ ಮೇಲೆ ಬದಲಾವಣೆ ಎಂದು ಹೇಳಿದ್ರೆ ಹೇಗೆ? ಎಂದು ಮಹಾಸಭಾದ ಮುಖಂಡರು ಬಿಜೆಪಿಗೆ ಹೈಕಮಾಂಡ್ಗೆ ಪ್ರಶ್ನೆ ಮಾಡಿದ್ದಾರೆ.
ಒಂದು ವೇಳೆ, ಸಿಎಂ ಸ್ಥಾನದಿಂದ ಯಡಿಯೂರಪ್ಪನವರನ್ನು ಕೆಳಗೆ ಇಳಿಸಿದರೆ, ಅದು ವೀರಶೈವ ಸಮಾಜಕ್ಕೆ ಮಾಡಿದ ಅನ್ಯಾಯ. ಅವರು ಕೇವಲ ವೀರಶೈವ ಸಮಾಜಕ್ಕೆ ಸೀಮಿತವಾದ ನಾಯಕರಲ್ಲ, ಬದಲಾಗಿ ಎಲ್ಲ ಜಾತಿ ಧರ್ಮದವರನ್ನು ಜೊತೆಗೆ ತೆಗೆದುಕೊಂಡು ಹೋದ ನಾಯಕ. ಬಿಎಸ್ವೈ ಅವರನ್ನು ಸಿಎಂ ಸ್ಥಾನದಿಂದ ಬದಲಾಯಿಸಿದರೆ, ಬಿಜೆಪಿಗೆ ಕಾಂಗ್ರೆಸ್ಗೆ ಬಂದ ಸ್ಥಿತಿಯೇ ಬರುತ್ತದೆ. ಕಾಂಗ್ರೆಸ್ ವೀರೇಂದ್ರ ಪಾಟೀಲ ಅವರನ್ನು ಕೆಳಗಿಳಿಸಿದ ಮೇಲೆ ಅಧಿಕಾರಕ್ಕೆ ಬರಲು ಇನ್ನೂ ಸಾಧ್ಯವಾಗುತ್ತಿಲ್ಲ ಎಂಬುದನ್ನು ಗಮನಿಸಬೇಕಿದೆ.
ಬಿಜೆಪಿ ಪಕ್ಷದ ಹೈಕಮಾಂಡ್ ಈ ಕುರಿತು ಗಂಭೀರವಾಗಿ ಯೋಚಿಸಬೇಕಿದೆ. ಸಚಿವ ಈಶ್ವರಪ್ಪ ಅವರ ಜೊತೆ ಪಕ್ಷ ಕಟ್ಟಿದ್ದರಿಂದ ಈಶ್ವರಪ್ಪನವರು ಹೈಕಮಾಂಡ್ಗೆ ಮನವರಿಕೆ ಮಾಡಿ ಕೊಡಬೇಕಿದೆ. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ, ನಮ್ಮ ರಾಜ್ಯ ಘಟಕದ ಅನುಮತಿ ಪಡೆದು ಹೋರಾಟ ನಡೆಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನ ಶಿವಮೊಗ್ಗ ವೀರಶೈವ ಮಹಾಸಭಾದ ಅಧ್ಯಕ್ಷ ರುದ್ರಮೂರ್ತಿ ನೀಡಿದ್ದಾರೆ.