ಶಿವಮೊಗ್ಗ:ರಾಜ್ಯದಲ್ಲಿ ಬಿಜೆಪಿ 22 ಸ್ಥಾನ ಗೆಲ್ಲದೇ ಹೋದರೆ ಯಡಿಯೂರಪ್ಪನವರು ರಾಜಕೀಯ ಸನ್ಯಾಸತ್ವ ತೆಗೆದುಕೊಳ್ಳುತ್ತಾರಾ ಎಂದು ಬಳ್ಳಾರಿ ಸಂಸದ ವಿ.ಎಸ್. ಉಗ್ರಪ್ಪ ಬಹಿರಂಗ ಸವಾಲ್ ಎಸೆದಿದ್ದಾರೆ.
ನಗರದಲ್ಲಿ ಮಾತನಾಡಿದ ಸಂಸದ ವಿ.ಎಸ್.ಉಗ್ರಪ್ಪ, ಯಡಿಯೂರಪ್ಪನವರು ಹೋದ ಕಡೆಯಲ್ಲೆಲ್ಲಾ 22 ಸ್ಥಾನ ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ. "22 ಸ್ಥಾನ ಗೆಲ್ಲದೇ ಹೋದರೆ ಯಡಿಯೂರಪ್ಪನವರೇ ರಾಜಕೀಯ ಸನ್ಯಾಸತ್ವ ತೆಗೆದುಕೊಳ್ಳುತ್ತೀರಾ" ಎಂದು ಬಹಿರಂಗವಾಗಿ ಸವಾಲು ಹಾಕಿದ್ದಾರೆ.
ಯಡಿಯೂರಪ್ಪನವರು ಜನಾದೇಶದ ಬಗ್ಗೆ ಮನ ಬಂದಂತೆ ಮಾತನಾಡುತ್ತಿದ್ದಾರೆ. ನಾನಂತೂ ಜನಾದೇಶವನ್ನು ಲಘುವಾಗಿ ಪರಿಗಣಿಸುವುದಿಲ್ಲ. ಏಕೆಂದರೆ ನಾನು ಸಂವಿಧಾನ ಪಾಠ ಮಾಡಿ ಬಂದವನು. ಬಳ್ಳಾರಿಯಲ್ಲಿ ಸಹ ಮೈತ್ರಿ ಪಕ್ಷದ ಪರ ಗಾಳಿ ಇದೆ. ಬೈ ಎಲೆಕ್ಷನ್ನಲ್ಲಿ ಸಹ ಉತ್ತಮ ಫಲಿತಾಂಶ ಬಂದಿತ್ತು. ಅದರಂತೆ ಈಗಲೂ ಸಹ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯಡಿಯೂರಪ್ಪಗೆ ಉಗ್ರಪ್ಪ ಸವಾಲ್! ಇನ್ನು ಬಿಜೆಪಿಯ ನಾಯಕರು, ಪಕ್ಷದ ಧುರೀಣರು, ಸಂಸದರು ಹತಾಶೆಯಿಂದ ಮನ ಬಂದಂತೆ ಮಾತನಾಡುತ್ತಿದ್ದಾರೆ. ಅಧಿಕಾರ ಕಳೆದುಕೊಳ್ಳುವ ಭಯ ಅವರಿಗೆ ಇದೆ ಎಂಬುದು ಅದರಿಂದಲೇ ತಿಳಿಯುತ್ತದೆ. ಹಾಗಾಗಿ ಹತಾಶೆಯಿಂದ ಕೆಲವೊಂದು ಹೇಳಿಕೆ ನೀಡುತ್ತಿದ್ದಾರೆ ಎಂದರು.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳುತ್ತದೆ ಎಂಬುದು ಗೋಡೆ ಬರಹದಷ್ಟೇ ಸತ್ಯ ಎಂದು ಭವಿಷ್ಯ ನುಡಿದರು. ಬಿಜೆಪಿಯ ವಿರುದ್ಧ ಇಂದು ಅಲೆ ಇಲ್ಲ. ಜಾತ್ಯತೀತ ವಿಚಾರಗಳಲ್ಲಿ ನಂಬಿಕೆ ಇರುವಂತಹ ಕಾಂಗ್ರೆಸ್ ಮತ್ತು ಇತರೆ ಮಿತ್ರ ಪಕ್ಷಗಳ ಪರವಾಗಿ ಅಲೆ ಇದೆ. ಹಾಗಾಗಿ ಮಿತ್ರ ಪಕ್ಷಗಳು ಸೇರಿ ಕೇಂದ್ರದಲ್ಲಿ ಅಧಿಕಾರ ನಡೆಸುತ್ತೇವೆ ಎಂದರು.
ಇನ್ನು ಕೆಲವು ದಿನಗಳಿಂದ ಮಾಧ್ಯಮಗಳು ಮೋದಿ ಅಧಿಕಾರ ಕಳೆದುಕೊಳ್ಳುತ್ತಾರೆ ಎನ್ನುವಂತಹ ಸುದ್ದಿ ಬಿತ್ತರಿಸುತ್ತಿವೆ. ಮೋದಿ ಅಲೆ ಈ ದೇಶದಲ್ಲಿ ಇಲ್ಲ ಎನ್ನುವುದು ಇದರಿಂದ ಗೊತ್ತಾಗುತ್ತದೆ.ಈ ಬಾರಿ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಪರ ಅಲೆ ಇರುವುದರಿಂದ ಜನರ ಪ್ರೀತಿ ವಿಶ್ವಾಸದಿಂದ ಗೆಲ್ಲುತ್ತೇವೆ. ಮೈತ್ರಿ ಪಕ್ಷಕ್ಕೆ ಯಾವುದೇ ಆತಂಕವಿಲ್ಲ. ಐದು ವರ್ಷ ಆಡಳಿತ ಮಾಡುತ್ತೇವೆ ಎಂದರು.