ಶಿವಮೊಗ್ಗ:ಸೊರಬ ತಾಲೂಕಿನ ವರದಾ ನದಿ ತಟದಲ್ಲಿ ಮೂರು ಕಾಡಾನೆಗಳು ಪ್ರತ್ಯಕ್ಷವಾಗಿವೆ. ಈ ಆನೆಗಳು ಮುಂಡಗೋಡ ಅರಣ್ಯ ಪ್ರದೇಶದಿಂದ ಬಂದಿರಬಹುದು ಎಂದು ಅಂದಾಜಿಸಲಾಗಿದೆ.
ಆನೆಗಳು ಈವರೆಗೂ ಯಾವುದೇ ತೋಟ, ಗದ್ದೆಗಳಿಗೆ ದಾಳಿ ಮಾಡಿಲ್ಲ. ಆದರೆ, ಮುಂದೆ ಆಹಾರಕ್ಕಾಗಿ ತೋಟಗಳಿಗೆ ದಾಳಿ ನಡೆಸುವ ಸಾಧ್ಯತೆ ಇದೆ ಎಂಬ ಭಯದಲ್ಲಿ ರೈತರು ಇದ್ದಾರೆ.
ಸೊರಬದ ಆನವಟ್ಟಿ ಠಾಣೆ ಪೊಲೀಸರು ಹಾಗೂ ಆನವಟ್ಟಿ ಅರಣ್ಯ ಇಲಾಖೆ ಸಿಬ್ಬಂದಿ ಹಾನಗಲ್ ಅರಣ್ಯದ ಮೂಲಕ ಮುಂಡಗೋಡ ಅರಣ್ಯಕ್ಕೆ ಆನೆಗಳನ್ನು ಕಳುಹಿಸಲು ಯತ್ನಿಸುತ್ತಿದ್ದಾರೆ.
ವರದಾ ನದಿಯ ಬಂಕಸಾಣ ಹಾಗೂ ಲಕ್ಕವಳ್ಳಿ ಭಾಗದಲ್ಲಿ ಆನೆಗಳ ಹಿಂಡು ಓಡಾಡುತ್ತಿದೆ. ಇದರಿಂದ ಈ ಭಾಗದ ರೈತರು ಆನೆಗಳನ್ನು ಸುರಕ್ಷಿತವಾಗಿ ಕಾಡಿಗೆ ವಾಪಸ್ ಕಳುಹಿಸಲು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.