ಶಿವಮೊಗ್ಗ :ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಕೆ ಬಿ ಶಿವಕುಮಾರ್ ಹೇಳಿದರು.
ಜಿಲ್ಲಾಡಳಿತ ಸಭಾಂಗಣದಲ್ಲಿ ಶಾಂತಿ ಸಮಿತಿ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಪೇಕ್ಷಿತ ಘಟನೆಗಳಿಂದ ಕಳೆದ ಒಂದು ವಾರದಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಹಿನ್ನೆಡೆ ಉಂಟಾಗಿದೆ.
ಎಲ್ಲರೂ ಸಾಮರಸ್ಯದಿಂದ ಬಾಳುವ ವಾತಾವರಣವನ್ನು ನಿರ್ಮಿಸುವುದು ನಮ್ಮ ಆದ್ಯತೆಯಾಗಿದೆ. ನಗರದ ಜನತೆಯಲ್ಲಿರುವ ಭಯದ ವಾತಾವರಣವನ್ನು ಹೋಗಲಾಡಿಸಲು ಜಿಲ್ಲಾಡಳಿತ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಪ್ರತಿಯೊಬ್ಬರೂ ಇದಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾಡಳಿತ ಸಭಾಂಗಣದಲ್ಲಿ ಶಾಂತಿ ಸಮಿತಿ ಸಭೆ 144 ಸೆಕ್ಷನ್ ಜಾರಿ ಇರುವ ಕಾರಣ ಬೆಳಗ್ಗೆ 7 ರಿಂದ 10 ಗಂಟೆವರೆಗೂ ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ಒದಗಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ ಎಂ ಶಾಂತರಾಜು, ಮಹಾನಗರ ಪಾಲಿಕೆ ಉಪ ಮೇಯರ್ ಸುರೇಖಾ ಮುರುಳೀಧರ್ ಹಾಗೂ ಸರ್ವಧರ್ಮಗಳ ಮುಖಂಡರು ಸೇರಿದಂತೆ ಹಲವು ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.