ಶಿವಮೊಗ್ಗ:ಎಲ್ಲಾ ಜಾತಿ-ಧರ್ಮಗಳಲ್ಲಿ ಶಾಂತಿ ನೆಲೆಸಬೇಕು. ಈ ನಿಟ್ಟಿನಲ್ಲಿ ಸಂಘ- ಸಂಸ್ಥೆಗಳಿರಬಹುದು, ಸರಕಾರ ಇರಬಹುದು ಎಲ್ಲರೂ ಸೇರಿಕೊಂಡು ಸಮಾಜದಲ್ಲಿ ಸಾಮರಸ್ಯ ಮತ್ತು ಶಾಂತಿ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವಹಿಸಬೇಕೆಂದು ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘಾ ಶರಣ ಶ್ರೀ ಹೇಳಿದ್ದಾರೆ.
ಇತ್ತೀಚೆಗೆ ಹತ್ಯೆಯಾದ ಹರ್ಷ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತರ ನಡೆ ಸಾಂತ್ವನದ ಕಡೆ. ಹಾಗಾಗಿ, ಎಲ್ಲಾ ಸ್ವಾಮಿಗಳು ಇಲ್ಲಿಗೆ ಬಂದಿದ್ದೇವೆ.
ಹರ್ಷ ತುಂಬಾ ಉತ್ಸಾಹಿ ಯುವಕನಾಗಿದ್ದ ಎಂದರು. ಸಮಾಜದಲ್ಲಿ ಸಂಘರ್ಷ ನಡೆಯಬೇಕು. ಆದರೆ, ಹಿಂಸಾತ್ಮಕ ಸಂಘರ್ಷ ನಡೆಯಬಾರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಹಿಂಸಾತ್ಮಕ ಸಂಘರ್ಷದಿಂದ ನಾವು ಹರ್ಷ ಅವರನ್ನು ಕಳೆದುಕೊಂಡಿದ್ದೇವೆ. ಅಂತರಂಗ,ಬಹಿರಂಗದಲ್ಲಿ ರಾಷ್ಟ್ರ ಪ್ರೇಮ ಹೊಂದಿದ್ದ ಹುಡುಗ ಹರ್ಷ.