ಶಿವಮೊಗ್ಗ: ಇಲ್ಲಿವರೆಗೆ ಮತದಾರರ ಪಟ್ಟಿಗೆ ಸೇರ್ಪಡೆ ಹಾಗೂ ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದು ಹಾಕುವ ಕಾರ್ಯ ಮಾಡಲಾಗುತ್ತಿತ್ತು. ಆದ್ರೆ ಇದೇ ಮೊದಲ ಬಾರಿಗೆ ಮತದಾರರ ಪಟ್ಟಿ ಪರಿಶೀಲನೆ ಕಾರ್ಯ ಮಾಡಲಾಗುತ್ತಿದೆ. ಮತದಾರರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶಿವಕುಮಾರ್ ಜಿಲ್ಲಾ ಮತದಾರರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.
ಮತದಾರರ ಪಟ್ಟಿ ಪರಿಶೀಲನಾ ಕಾರ್ಯಕ್ಕೆ ಸಹಕರಿಸಿ: ಜಿಲ್ಲಾಧಿಕಾರಿ ಮನವಿ - ಬಿಎಲ್ಓಗಳು ತಮಗೆ ಕೇಳಿದ ಮಾಹಿತಿಯನ್ನು ನೀಡಿ ಸಹಕರಿಸಬೇಕು
ಸೆಪ್ಟೆಂಬರ್ 1ರಿಂದ ಅಕ್ಟೋಂಬರ್ 15ರ ತನಕ ಮತದಾರರ ಪಟ್ಟಿ ಪರಿಶೀಲನಾ ಕಾರ್ಯ ಹಮ್ಮಿಕೊಳ್ಳಲಾಗಿದೆ. ಮತದಾರರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶಿವಕುಮಾರ್ ಹೇಳಿದರು.
ಜಿಲ್ಲಾ ಪಂಚಾಯತ್ನ ಸಹ್ಯಾದ್ರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿ ಶಿವಕುಮಾರ್, ಸೆಪ್ಟೆಂಬರ್ 1ರಿಂದ ಅಕ್ಟೋಂಬರ್ 15ರ ತನಕ ಮತದಾರರ ಪಟ್ಟಿ ಪರಿಶೀಲನಾ ಕಾರ್ಯ ಹಮ್ಮಿಕೊಳ್ಳಲಾಗಿದೆ. ಚುನಾವಣಾ ಆಯೋಗದ ಆದೇಶದ ಮೇರೆಗೆ ಮತದಾರರ ಪಟ್ಟಿ ಪರಿಶೀಲನೆ ಹಾಗೂ ಪರಿಷ್ಕರಣೆ ಮಾಡಲಾಗುತ್ತಿದೆ. ಈ ವೇಳೆ ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ, ಇದ್ದರೆ ಹೆಸರು, ವಿಳಾಸ ಸರಿಯಾಗಿ ಇದೆಯೇ ಎಂಬುದನ್ನು ಪರಿಶೀಲನೆ ಮಾಡಬಹುದಾಗಿದೆ ಎಂದು ತಿಳಿಸಿದರು.
ಮತದಾರರ ಪರಿಷ್ಕರಣೆ ಹಾಗೂ ಪರಿಶೀಲನೆಗೆ ಬಿಎಲ್ಒಗಳು ಮನೆ ಮನೆ ಭೇಟಿ ನೀಡುತ್ತಾರೆ. ಬಿಎಲ್ಒಗಳು ತಮಗೆ ಕೇಳಿದ ಮಾಹಿತಿಯನ್ನು ನೀಡಿ ಸಹಕರಿಸಬೇಕು. ಸೆಪ್ಟೆಂಬರ್ನಿಂದ ಇಲ್ಲಿವರೆಗೂ 3 ಲಕ್ಷದಷ್ಟು ಮತದಾರರು ವಿವಿಧ ರೀತಿಯ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದಾರೆ. ಬಿಎಲ್ಒಗಳಿಗೆ ಮಾಹಿತಿ ನೀಡಲು ಆಗದೆ ಇರುವವರು, ಆನ್ಲೈನ್ ಮೂಲಕ ಅಥವಾ ತಾಲೂಕು ಕಚೇರಿಗೆ ಬಂದು ಮಾಹಿತಿ ನೀಡಬಹುದು. ಹೆಚ್ಚಿನ ಮಾಹಿತಿ ಪಡೆಯಲು 1950ಕ್ಕೆ ಕರೆ ಮಾಡಿ ಕೇಳಬಹುದಾಗಿದೆ ಎಂದರು. ಮತದಾರರ ಪಟ್ಟಿ ಪರಿಶೀಲನೆಗಾಗಿ ನವೆಂಬರ್ 2, 3, 9 ಹಾಗೂ 10 ರಂದು ವಿಶೇಷ ಕ್ಯಾಂಪೇನ್ ನಡೆಸಲಾಗುತ್ತದೆ ಎಂದರು.