ಶಿವಮೊಗ್ಗ:ದೇಶದಲ್ಲಿಯೇ ಅಪರೂಪದಲ್ಲಿ ಅಪರೂಪವಾದ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ಸಾಗರದ ವೈದ್ಯರು ನಡೆಸಿ ಯಶಸ್ವಿಯಾಗಿದ್ದಾರೆ. ಇದು ಮಧ್ಯ ಆಫ್ರಿಕಾದಲ್ಲಿ ಕಂಡು ಬರುವ ಕಣ್ಣಿನ ವ್ಯಾಧಿಯಾಗಿದ್ದು, ಭಾರತದಲ್ಲಿ ಈಗ ಪಶ್ಚಿಮ ಘಟ್ಟದಲ್ಲಿ ಕಂಡು ಬಂದಿದೆ. ಲೋವಾ ಲೋವಾ ಎಂಬ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದ ಯುವಕನಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ ಯುವಕನ ಕಣ್ಣನ್ನು ರಕ್ಷಿಸಲಾಗಿದೆ.
ಸಾಗರ ತಾಲೂಕು ಮಂಡಗಳಲೆ ಗ್ರಾಮದ 19 ವರ್ಷದ ಯುವಕನೋರ್ವ ಕಣ್ಣು ನೋವೆಂದು ಬಂದಾಗ ಪರೀಕ್ಷೆಗೆ ಒಳಪಡಿಸಿದಾಗ ಕಣ್ಣಿನಲ್ಲಿ ಹುಳವೊಂದು ಓಡಾಡುತ್ತಿರುವುದನ್ನು ಕಂಡು ತಕ್ಷಣ ಶಸ್ತ್ರಚಿಕಿತ್ಸೆ ನಡೆಸಬೇಕೆಂದು ಆಸ್ಪತ್ರೆಯ ಕಣ್ಣಿನ ವಿಭಾಗದ ವೈದ್ಯಾಧಿಕಾರಿ ಡಾ.ಪ್ರಮೋದ್ ತಿಳಿದು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಯುವಕನ ಕಣ್ಣಿನಲ್ಲಿದ್ದ 3 ಸೆಂ.ಮೀ ಉದ್ದ ಲೋವಾ ಲೋವಾ ಎಂಬ ಹುಳವನ್ನು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ.
ಒಟ್ಟಾರೆ ಮೊದಲ ವಿಶೇಷ ಹಾಗೂ ಅಪರೂಪದ ಶಸ್ತ್ರ ಚಿಕಿತ್ಸೆಯನ್ನು ಸಾಗರ ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ನಡೆಸಿದ್ದಾರೆ. ಇಂತಹ ಸಮಸ್ಯೆ ನಮ್ಮ ದೇಶದಲ್ಲಿ ಅಪರೂಪಕ್ಕೆ ಕಂಡುಬರುತ್ತೆ. ಇದು ಹೆಚ್ಚಾಗಿ ಮಧ್ಯ ಆಫ್ರಿಕಾ ದೇಶದಲ್ಲಿ ಕಾಣಿಸಿಕೊಳ್ಳುತ್ತದೆ. ನಮ್ಮ ದೇಶದಲ್ಲಿ ಈ ರೀತಿಯ ಶಸ್ತ್ರ ಚಿಕಿತ್ಸೆ ಈವರೆಗೆ ಕೇವಲ 10 ಮಾತ್ರ ನಡೆದಿವೆ. ಇದರಲ್ಲಿ ಬಹುತೇಕ ಮಧ್ಯ ಆಫ್ರಿಕಾದಿಂದ ಬಂದವರಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.