ಶಿವಮೊಗ್ಗ:ಶಿಕಾರಿಪುರದಲ್ಲಿ ಚಲಿಸುತ್ತಿದ್ದ ಬಸ್ನ ಮೇಲೆ ಉದ್ರಿಕ್ತ ಗುಂಪೂಂದು ಕಲ್ಲು ತೂರಾಟ ನಡೆಸಿದೆ. ಇದರಿಂದ ಬಸ್ಸಿನ ಗಾಜು ಸಂಪೂರ್ಣ ಪುಡಿ ಪುಡಿಯಾಗಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ರಸ್ತೆಯ ಪದವಿ ಪೂರ್ವ ಕಾಲೇಜಿನ ಮುಂಭಾಗ ಘಟನೆ ನಡೆದಿದೆ. ಹಿಜಾಬ್ - ಕೇಸರಿ ಶಾಲು ವಿವಾದ ಸಂಬಂಧ ಕಾಲೇಜಿನ ಬಳಿ ಪ್ರತಿಭಟನೆ ನಡೆಯುವಾಗ ಉದ್ರಿಕ್ತ ಅನ್ಯ ಕೋಮಿನ ಯುವಕರು ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಪ್ರಯಾಣಿಕರು ಹೆದರಿ ಬಸ್ ಇಳಿದು ಓಡಿ ಹೋಗಿದ್ದಾರೆ. ಬಸ್ನ ಗಾಜು ಸಂಪೂರ್ಣ ಪುಡಿ ಪುಡಿಯಾಗಿದೆ. ಸ್ಥಳಕ್ಕೆ ಶಿಕಾರಿಪುರ ಪೊಲೀಸರು ಭೇಟಿ ನೀಡಿ ಗುಂಪು ಚದುರಿಸಿದ್ದು, ಬಿಗುವಿನ ವಾತಾರಣ ನಿರ್ಮಾಣವಾಗಿದೆ.
ಇದನ್ನೂ ಓದಿ:ಶಿವಮೊಗ್ಗದಲ್ಲಿ ಕೇಸರಿ ಶಾಲು, ಹಿಜಾಬ್ ಬೆಂಬಲಿಗ ವಿದ್ಯಾರ್ಥಿಗಳ ನಡುವೆ ಕಲ್ಲು ತೂರಾಟ!
144 ಸೆಕ್ಷನ್ ಜಾರಿ:ಹೈಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದ್ದರೂ ಕೂಡ ಹಿಜಾಬ್ - ಕೇಸರಿ ಶಾಲು ವಿವಾದ ಹಿಂಸಾತ್ಮಕ ರೂಪ ಪಡೆದುಕೊಳ್ಳುತ್ತಿದೆ. ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಕೇಸರಿ ಶಾಲು, ಹಿಜಾಬ್ ಬೆಂಬಲಿಗ ವಿದ್ಯಾರ್ಥಿಗಳ ನಡುವೆ ಕಲ್ಲು ತೂರಾಟ ನಡೆದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.
ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆದಿದೆ. ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ತಮಗೆ ನ್ಯಾಯಬೇಕು ಎಂದು ಹೇಳಿ ಪ್ರತಿಭಟನೆಗೆ ಮುಂದಾಗಿ ಬಿ.ಹೆಚ್.ರಸ್ತೆ ಕಡೆ ಬರುವಾಗ ಕೆಲ ಯುವಕರು ಘೋಷಣೆ ಹಾಕುತ್ತಾ ಸಾಗುವಾಗ ಪೊಲೀಸರು ತಡೆಯಲು ಯತ್ನಿಸಿದರೂ ಸಹ ಕೇಳದೆ ರಸ್ತೆಗೆ ಹೋಗಲು ಮುಂದಾದದ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಅನ್ಯ ಕೋಮಿನ ಯುವಕರು ಬಸವೇಶ್ವರ ವೃತ್ತದ ಬಳಿ ಬಂದು ಪ್ರತಿಭಟನೆ ನಡೆಸಿದರು. ಇವರನ್ನು ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದರು.