ಶಿವಮೊಗ್ಗ:ಜಯನಗರ ಪೊಲೀಸ್ ಠಾಣೆಗೆ ಇಂದು ಬೆಳಗ್ಗೆಯೇ ಅತಿಥಿಯ ಆಗಮನವಾಗಿತ್ತು. ಕಳ್ಳರು, ರೌಡಿಗಳನ್ನು ಹಿಡಿದು ತರುವ ಪೊಲೀಸರು, ತಮ್ಮ ಠಾಣೆಗೆ ಹಾವು ಬಂದಿದೆ ಎಂದು ಗೊತ್ತಾಗುತ್ತಿದ್ದಂತೆಯೇ ಅರೆಕ್ಷಣ ನಿಬ್ಬೆರಗಾದ್ರು.
ಪೊಲೀಸ್ ಠಾಣೆಗೆ ಬಂದ ಅತಿಥಿಯನ್ನ ಸೆರೆಹಿಡಿದ ಸ್ನೇಕ್ ಕಿರಣ್ ಠಾಣೆಗೆ ಬಂದ 4 ಅಡಿ ಉದ್ದದ ಕೆರೆ ಹಾವೊಂದು ಸೀದಾ ಜೆರಾಕ್ಸ್ ಮೆಶಿನ್ ಒಳಗೆ ಸೇರಿಕೊಂಡಿದೆ. ತಕ್ಷಣ ಉರಗ ತಜ್ಞ ಕಿರಣ್ ಅವರಿಗೆ ಫೋನಾಯಿಸಲಾಗಿದೆ.
ಸ್ನೇಕ್ ಕಿರಣ್ ಬರುವಷ್ಟರಲ್ಲಿ ಹಾವು ಕ್ಯಾಬಿನ್ನ ಪ್ಲಾಸ್ಟಿಕ್ ಬಾಕ್ಸ್ ಒಳಗೆ ಸೇರಿಕೊಂಡಿತ್ತು. ನಂತರ ಅದನ್ನು ಹುಷಾರಾಗಿ ಬಿಡಿಸಿ, ಹೊರಗೆ ತೆಗೆಯುತ್ತಿದ್ದಂತೆಯೇ ಹಾವು ಓಡಲು ಶುರು ಮಾಡಿದೆ. ಬಳಿಕ ಹಾವು ಹಿಡಿದ ಸ್ನೇಕ್ ಕಿರಣ್, ತನ್ನ ಕೈಯಲ್ಲಿ ಕೆಲ ಕಾಲ ಆಟ ಆಡಿಸಿದರು.
ಪೊಲೀಸ್ ಠಾಣೆಯ ಹಿಂಭಾಗ ಸ್ವಲ್ಪ ಗಿಡ-ಗಂಟಿಗಳು ಬೆಳೆದುಕೊಂಡಿದ್ದು, ಹಾವು ಅಲ್ಲಿಂದಲೇ ಆಹಾರ ಅರಸಿ ಬಂದಿರಬಹುದು. ಈ ಭಾಗದಲ್ಲಿ ಹೆಚ್ಚು ಇಲಿಗಳು ಇರಬಹುದು. ಜನರನ್ನು ಕಂಡು ಗಾಬರಿಯಾಗಿ ಒಳಗೆ ಸೇರಿಕೊಂಡಿದೆ ಎಂದು ಹೇಳಿದ ಸ್ನೇಕ್ ಕಿರಣ್, ಹಾವನ್ನು ಬಟ್ಟೆ ಚೀಲದಲ್ಲಿ ಹಾಕಿಕೊಂಡು ಹೋದರು.