ಕರ್ನಾಟಕ

karnataka

ETV Bharat / city

ಯಡಿಯೂರಪ್ಪ-ಈಶ್ವರಪ್ಪನಿಗೆ ಮುಖಭಂಗವಾಗುವ ರೀತಿ ಪರಿಷತ್ ಚುನಾವಣೆ ನಡೆಸಿ : ಸಿದ್ದರಾಮಯ್ಯ ಕರೆ - ಶಿವಮೊಗ್ಗದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ

ಶಿವಮೊಗ್ಗದಲ್ಲಿ ವಿಧಾನ ಪರಿಷತ್ ಅಭ್ಯರ್ಥಿ ಪ್ರಸನ್ನ ಕುಮಾರ್ ಪರ ಪ್ರಚಾರ ನಡೆಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ..

siddaramaiah-and-dks-council-election-campaign-in-shivamogga
ಯಡಿಯೂರಪ್ಪ, ಈಶ್ವರಪ್ಪನಿಗೆ ಮುಖಭಂಗವಾಗುವ ರೀತಿ ಪರಿಷತ್ ಚುನಾವಣೆ ನಡೆಸಿ: ಸಿದ್ದರಾಮಯ್ಯ ಕರೆ

By

Published : Dec 4, 2021, 1:32 PM IST

ಶಿವಮೊಗ್ಗ:ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್.ಪ್ರಸನ್ನಕುಮಾರ್ ಅವರನ್ನು ಗೆಲ್ಲಿಸಿ. ಈಶ್ವರಪ್ಪ ಹಾಗೂ ಯಡಿಯೂರಪ್ಪನವರಿಗೆ ಮುಖಭಂಗವಾಗುವ ರೀತಿ ಚುನಾವಣೆ ನಡೆಸಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಶಿವಮೊಗ್ಗದಲ್ಲಿ ತಮ್ಮ ಅಭ್ಯರ್ಥಿ ಆರ್.ಪ್ರಸನ್ನಕುಮಾರ್ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯನವರು, ಬಿಜೆಪಿಗೆ ಅಧಿಕಾರ ವಿಕೇಂದ್ರಿಕರಣದಲ್ಲಿ ನಂಬಿಕೆ ಇಲ್ಲ. ಅಗತ್ಯ ವಸ್ತು ಕಾಯ್ದೆ ತಿದ್ದುಪಡಿಯ ಬಿಲ್ ದೆಹಲಿಯಿಂದಲೇ ಬಂದಿದೆ.

ಅದನ್ನು ಇಲ್ಲಿ ಕಾನೂನು ಮಾಡಿ ಸದನದಲ್ಲಿ ಪಾಸ್ ಮಾಡಲಾಗಿದೆ. ಯಡಿಯೂರಪ್ಪ, ಬೊಮ್ಮಾಯಿ ಅವರಿಗೆ ಕೇಂದ್ರದವರನ್ನು ಕೇಳಲು ಧೈರ್ಯ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್​​ ಭರ್ಜರಿ ಪ್ರಚಾರ

15ನೇ ಹಣಕಾಸು ಆಯೋಗ ಬರುವುದಕ್ಕಿಂತ ಮುಂಚೆ ತೆರಿಗೆ ಹಾಗೂ ಕೇಂದ್ರದ ಅನುದಾನ 70 ಸಾವಿರ ಕೋಟಿ‌ ರೂ. ಬರುತ್ತಿತ್ತು. ಈಗ‌ 40 ಸಾವಿರ ಕೋಟಿ ಖೋತಾ ಆಗಿದೆ. ಇದರಿಂದ ಅಭಿವೃದ್ದಿ ಹೇಗೆ ಆಗುತ್ತದೆ?. ಉದ್ಯೋಗ ಖಾತ್ರಿ ಯೋಜನೆ ಬಂದಿರದಿದ್ದರೆ ಗ್ರಾಮಗಳಲ್ಲಿ ಏನೂ ಆಗುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಈಶ್ವರಪ್ಪ ರಾಜೀನಾಮೆ ನೀಡಬೇಕಿತ್ತು: ಈಶ್ವರಪ್ಪ ಮಾನ, ಮರ್ಯಾದೆ ಇದ್ದಿದ್ರಿ ಇಷ್ಟೊತ್ತಿಗೆ ರಾಜೀನಾಮೆ ನೀಡಬೇಕಿತ್ತು. ಈಶ್ವರಪ್ಪನವರಿಗೆ ಸ್ವಾಭಿಮಾನ ಇಲ್ಲ. ಯಡಿಯೂರಪ್ಪನವರ ವಿರುದ್ದ ರಾಜ್ಯಪಾಲರಿಗೆ ಪತ್ರ ಬರೆದರು. ಸ್ವಾಭಿಮಾನ ಇದ್ದಿದ್ರೆ ರಾಜೀನಾಮೆ ಕೊಟ್ಟು ಬರಬೇಕಿತ್ತು. ನಾವು ಮೀಸಲಾತಿಯನ್ನು 10 ವರ್ಷ ಮಾಡಿದ್ದೆವು. ಬಿಜೆಪಿಯವರು 5 ವರ್ಷಕ್ಕೆ ಇಳಿಸಿದ್ದಾರೆ. ಈಶ್ವರಪ್ಪ ಏನ್ ಮಾತನಾಡುತ್ತಾರೆ ಎಂದು ಗೊತ್ತಾಗುವುದಿಲ್ಲ. ಅವರಿಗೆ ಬ್ರೇನ್​ಗೂ,ನಾಲಿಗೆಗೂ ಲಿಂಕ್ ತಪ್ಪಿಹೋಗಿದೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಸರ್ಕಾರ ಬಂದ ಮೇಲೆ ಭ್ರಷ್ಟಚಾರ ವ್ಯಾಪಕವಾಗಿದೆ. ಪರ್ಸೆಂಟೇಜ್​​ ಸರ್ಕಾರ ಅಂತಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮೋದಿಗೆ ಪತ್ರ ಬರೆದಿದ್ದಾರೆ. ಇದರಿಂದ ಕೆಲಸ ಏನ್ ಮಾಡಲು ಆಗಲ್ಲ. ಎಲ್ಲಾ‌ ಕಡೆ 10-15 ಪರ್ಸೆಂಟೇಜ್ ನೀಡಬೇಕಾದ ಸ್ಥಿತಿ ಬಂದಿದೆ. ಈಶ್ವರಪ್ಪನವರು ಎಷ್ಟು ಪರ್ಸೆಂಟೇಜ್ ತೆಗೆದುಕೊಳ್ಳುತ್ತಾರೆ ಅಂತಾ ಕೇಳಿ. ಅವರು ಇಲ್ಲ ಅಂತಾ ಹೇಳಲಿ, ನಾನು ಲಂಚ ಕೊಟ್ಟು ಬಂದವರ ಬಳಿಯೇ ಹೇಳಿಸುತ್ತೇನೆ. ಈ ರೀತಿ ಯಾವಾಗಲೂ ಆಗಿಲ್ಲ. ಎಲ್​ಒಸಿ ನಾನು ಒಂದು ರೂಪಾಯಿ ಕೇಳಿಲ್ಲ. ನಾನು ಹಣ ಕೇಳಿದ್ದೇನೆ ಎಂದಾದರೆ, ನಾನು ರಾಜಕೀಯ ಬಿಟ್ಟು ಹೋಗುತ್ತೇನೆ ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಕಾಂಗ್ರೆಸ್​​ನ ಗಾಳಿ ಪ್ರಾರಂಭವಾಗಿದೆ :ಸಿದ್ದರಾಮಯ್ಯ ಮಾತನಾಡುವುದಕ್ಕೂ ಮುನ್ನ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿಜೆಪಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಹಾನಗಲ್ ಚುನಾವಣೆಯಾದ ಮೇಲೆ‌‌ ಕಾಂಗ್ರೆಸ್​​ನ ಗಾಳಿ ಪ್ರಾರಂಭವಾಗಿದೆ. ಈಗ ನಾವು‌‌ ವಿರೋಧ ಪಕ್ಷದಲ್ಲಿದ್ದೇವೆ. ನಮ್ಮವರನ್ನು ಕರೆದುಕೊಂಡು ಬಿಜೆಪಿಯವರು ಸರ್ಕಾರ ಮಾಡಿದ್ದಾರೆ. ಡಬ್ಬಲ್ ಎಂಜಿನ್ ಸರ್ಕಾರ ಇದೆ.

ಆಪರೇಷನ್ ಕಮಲ ಮಾಡಿ ಸರ್ಕಾರ ಮಾಡಿದ್ದಾರೆ. ಯಡಿಯೂರಪ್ಪ ಕಣ್ಣೀರು ಹಾಕಿ ರಾಜೀನಾಮೆ ನೀಡಿದ್ದರು. ಅವರ ಕಣ್ಣೀರಿನಲ್ಲಿಯೇ ಬಿಜೆಪಿ ತೊಳೆದು ಹೋಗುತ್ತದೆ. ಜೆಡಿಎಸ್ ತೊರೆದು ಬಂದವರು ರಾಷ್ಟ್ರೀಯ ಪಕ್ಷದಿಂದ ಮಾತ್ರ ಅಭಿವೃದ್ದಿ ಸಾಧ್ಯ ಎಂದು ಕಾಂಗ್ರೆಸ್​​ಗೆ ಬಂದಿದ್ದಾರೆ ಎಂದರು.

ದೇಶದ ಅತಿದೊಡ್ಡ ಭ್ರಷ್ಟಾಚಾರ ಸರ್ಕಾರ ಅಂದ್ರೆ, ಬಿಜೆಪಿ ಸರ್ಕಾರವಾಗಿದೆ. ಈಶ್ವರಪ್ಪನವರಿಗೆ ಮಾನ, ಮರ್ಯಾದೆ ಇಲ್ಲ. ಬೊಮ್ಮಾಯಿ ಅವರು ಈಶ್ವರಪ್ಪನವರನ್ನು ಕಿತ್ತು ಹಾಕಬೇಕಿತ್ತು ಎಂದ ಡಿಕೆಶಿ, ಶಿವಮೊಗ್ಗದಲ್ಲಿ ರಣರಂಗದ ರಾಜಕೀಯ ಪ್ರಾರಂಭ ಮಾಡುತ್ತೇವೆ. ಒಬ್ಬೊಬ್ಬರು ಒಂದೊಂದು ವೋಟು ಸಂಪಾದಿಸಬೇಕು. ಈಗ ಯಡಿಯೂರಪ್ಪನವರ ಸರ್ಕಾರ ಮುಗೀತು. ಮುಂದೆ ಕಾಂಗ್ರೆಸ್ ಸರ್ಕಾರ ಬರುತ್ತದೆ ಎಂದು ಬಿಜೆಪಿಯವರಿಗೆ ತಿಳಿಸಿ ಎಂದು ಕಾರ್ಯಕರ್ತರನ್ನು ಡಿಕೆಶಿ ಹುರಿದುಂಬಿಸಿದ್ದಾರೆ.

ಶಿವಮೊಗ್ಗದಲ್ಲಿ ಮುತ್ತು-ರತ್ನ ಇದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಈಶ್ವರಪ್ಪನವರ ಹೆಸರು ಹೇಳದೆ ವ್ಯಂಗ್ಯವಾಡಿದರು. ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್​ ಚುನಾವಣೆ ನಡೆಸಲಿಲ್ಲ. ಅಧಿಕಾರದಲ್ಲಿದ್ದ ನಿಮಗೆ‌ ಸೋಲಿನ ಭಯದಿಂದ ಚುನಾವಣೆ ನಡೆಸಲಿಲ್ಲ ಎಂದು ಬಿಜೆಪಿ ವಿರುದ್ದ ಕಿಡಿಕಾರಿದರು. ಪ್ರಸನ್ನ ಆರು ವರ್ಷದಿಂದ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಪ್ರಸನ್ನ ಅಭ್ಯರ್ಥಿಯಲ್ಲ‌, ನಾನು ಮತ್ತು ಸಿದ್ದರಾಮಯ್ಯ ಅಭ್ಯರ್ಥಿಯಾಗಿದ್ದೇವೆ ಎಂದು ಡಿಕೆಶಿ ಹೇಳಿದರು.

ಮೇಕೆದಾಟು ಹೋರಾಟ :ಜನವರಿಯಲ್ಲಿ ಮೇಕೆದಾಟು ಯೋಜನೆ ಜಾರಿಗೆ ಪಾದಯಾತ್ರೆ 120 ಕಿ.ಮೀ ನಡೆಸಲಾಗುವುದು. ಬಿಜೆಪಿ ಸರ್ಕಾರ ಯೋಜನೆ ಮಾಡಲು ಹಿಂದೇಟು ಹಾಕಿದೆ. ಯಾವುದೇ ತಡೆಯಾಜ್ಞೆ ಇಲ್ಲ. ಇದು ಐತಿಹಾಸಿಕ ಹೋರಾಟವಾಗಲಿದೆ. ಪ್ರಸನ್ನರವರಿಗೆ ಮತ ನೀಡಿ ನನ್ನ- ಸಿದ್ದರಾಮಯ್ಯನವರ ಕೈ ಬಲಪಡಿಸಬೇಕು ಎಂದು ಡಿಕೆಶಿ ಕರೆ ನೀಡಿದರು.

ಇದೇ ವೇಳೆ ಮಾತನಾಡಿದ ಅಭ್ಯರ್ಥಿ ಆರ್.ಪ್ರಸನ್ನ ಕುಮಾರ್, ಸ್ಥಳೀಯ ಜನಪ್ರತಿನಿಧಿಗಳ ಧ್ವನಿಯಾಗಿ ನಾನು ಸದನದಲ್ಲಿ ಇರುತ್ತೇನೆ. ನನಗೆ ಮತ ಹಾಕಿ ಗೆಲ್ಲಿಸಿ ಎಂದರು. ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್ ಸೇರಿ ಇತರರು ಹಾಜರಿದ್ದರು.

ಇದನ್ನೂ ಓದಿ :ನಾನು ಸಿಎಂ ಆಗುವ ಮಾತೇ ಬರುವುದಿಲ್ಲ.. ನಾನು ಆ ಆಸೆ ಇಟ್ಟುಕೊಂಡಿಲ್ಲ.. ಸಚಿವ ನಿರಾಣಿ

ABOUT THE AUTHOR

...view details