ಶಿವಮೊಗ್ಗ: ಬಾಬರಿ ಮಸೀದಿ ಪುನರ್ ನಿರ್ಮಾಣವಾಗುವವರೆಗೂ ನಮ್ಮ ಹೋರಾಟ ಅನಿವಾರ್ಯ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್.ಡಿ.ಪಿ.ಐ.) ಹೇಳಿದೆ.
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಸಂಘಟನೆಯ ಕಾರ್ಯಕರ್ತರು ಬಾಬರಿ ಮಸೀದಿ ಪುನರ್ ನಿರ್ಮಾಣ ಆಗಬೇಕು. ಅಲ್ಲಿಯವರೆಗೂ ನಾವು ಹೋರಾಟವನ್ನು ಮುಂದುವರೆಸುತ್ತೇವೆ ಎಂದು ಘೋಷಣೆ ಮಾಡಿದರು.
ಸುಪ್ರೀಂಕೋರ್ಟ್ 1045 ಪುಟಗಳ ತೀರ್ಪಿನಲ್ಲಿ ಬಾಬರಿ ಮಸೀದಿಯನ್ನು ಯಾವುದೇ ಮಂದಿರ ಒಡೆದು ನಿರ್ಮಿಸಲಾಗಿಲ್ಲ. ಪುರಾತತ್ವ ಇಲಾಖೆ ಯಾವುದೇ ಮಂದಿರದ ಅವಶೇಷಗಳನ್ನು ಗುರುತಿಸಲಿಲ್ಲ. 1949ರ ವರೆಗೆ ಅಲ್ಲಿ ನಮಾಜ್ ನಡೆಸಲಾಗುತ್ತಿತ್ತು ಎಂದು ಸ್ಪಷ್ಟಪಡಿಸಿದೆ. ಅಲ್ಲದೇ, 1949 ಡಿ. 23ರಂದು ಮಸೀದಿ ಒಳಗೆ ಅಕ್ರಮವಾಗಿ ಮೂರ್ತಿ ಸ್ಥಾಪಿಸಿರುವುದು ತಪ್ಪು. ಇದೊಂದು ಕ್ರಿಮಿನಲ್ ಕೃತ್ಯ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂಬುದನ್ನು ಹೇಳಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
2018ರ ಶಬರಿಮಲೆ ತೀರ್ಪಿನ ವಿರುದ್ದ ಪ್ರತಿಭಟನೆಗಳು ನಡೆದು ತೀರ್ಪನ್ನು ತಡೆಹಿಡಿಯಲಾಗಿತ್ತು. ಎಸ್ಸಿ, ಎಸ್ಟಿ ಕಾನೂನಿನ ವಿರುದ್ಧ ತದ ನಂತರ ಹೋರಾಟದಲ್ಲಿ 11 ಜನ ಜೀವ ಕಳೆದುಕೊಂಡಿದ್ದರು. ಆ ಮೇಲೆ ತೀರ್ಪನ್ನು ವಾಪಸ್ ಪಡೆಯಲಾಯಿತು. ಅದೇ ರೀತಿ ದೆಹಲಿಯ ತುಘಲಕ್ ಬಾದ್ನಲ್ಲಿ ರವಿದಾಸ ಮಂದಿರವನ್ನು ಒಡೆಯಲು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಆದರೆ, ವ್ಯಾಪಕ ಪ್ರತಿಭಟನೆ ಬಳಿಕ ಮಂದಿರ ಪುನರ್ ನಿರ್ಮಿಸಲು ಆದೇಶ ನೀಡಿತು. ಇದೇ ರೀತಿ ಬಾಬರಿ ಮಸೀದಿ ಧ್ವಂಸವಾಗಿದ್ದು ಅನ್ಯಾಯ ಎಂದು ಸ್ಪಷ್ಟವಾಗಿದ್ದರಿಂದ ಮಸೀದಿಯನ್ನು ಪುನರ್ ನಿರ್ಮಿಸಿ ನ್ಯಾಯ ಒದಗಿಸಬೇಕು ಎಂದು ಎಸ್.ಡಿ.ಪಿ.ಐ. ಕಾರ್ಯಕರ್ತರು ಒತ್ತಾಯಿಸಿದರು.