ಶಿವಮೊಗ್ಗ: ವರದಕ್ಷಿಣೆ ಕಿರುಕುಳ ಹಾಗೂ ದೈಹಿಕ ಹಿಂಸೆ ನೀಡಿದ ಹಿನ್ನೆಲೆಯಲ್ಲಿ ತನ್ನ ಪತಿ ಪೊಲೀಸ್ ಕಾನ್ಸ್‌ಟೇಬಲ್ ಹಾಗೂ ಆತನ ತಮ್ಮನ ವಿರುದ್ಧ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪತ್ನಿ ದೂರು ನೀಡಿದ್ದಾರೆ. ಆದ್ರೆ ತಿಂಗಳೇ ಕಳೆದರೂ ಆರೋಪಿಗಳ ವಿರುದ್ಧ ಪೊಲೀಸರು ಕ್ರಮಕೈಗೊಂಡಿಲ್ಲ ಎಂದು ಸಂತ್ರಸ್ತೆ ಅಳಲು ತೋಡಿಕೊಂಡರು.
ಪೊಲೀಸ್ ಪತಿ ಹಾಗೂ ಆತನ ತಮ್ಮನಿಂದ ವರದಕ್ಷಿಣೆ ಕಿರುಕುಳ ಆರೋಪ ತಾಲೂಕಿನ ಆಯನೂರು ಬಳಿಯ ಚನ್ನಹಳ್ಳಿಯ ಆನೆಸರದ ನಿವಾಸಿ ಪೊಲೀಸ್ ಕಾನ್ಸ್‌ಟೇಬಲ್ ಜಗದೀಶ್ ನಾಯ್ಕ್ ಹಾಗೂ ಆತನ ತಮ್ಮ ರವಿ ನಾಯ್ಕ್ ವಿರುದ್ಧ ವರದಕ್ಷಿಣೆ ಕಿರುಕುಳ ಸಂಬಂಧ ಪ್ರಕರಣ ದಾಖಲಾಗಿದೆ. ಬಳಿಕ ಪತಿ ಜಗದೀಶ್ ನಾಯ್ಕ್ ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಿಸಿದ ರೋಜಾ ಹೇಳುತ್ತಾರೆ.
ಪ್ರಕರಣದ ಹಿನ್ನೆಲೆ:
ಜಗದೀಶ್ ನಾಯ್ಕ ಹಾಗೂ ರವಿ ನಾಯಕ ಎಂಬಿಬ್ಬರಿಗೆ ಶಿವಮೊಗ್ಗ ತಾಲೂಕು ಬೀರನಕೆರೆ ತಾಂಡದ ರೋಜಾ ಮತ್ತು ಅವಳ ಅಕ್ಕ ರೇಖಾ ಜೊತೆ 2019ರ ಜೂನ್ನಲ್ಲಿ ಮದುವೆಯಾಗಿತ್ತು. ಜಗದೀಶ್ಗೆ ವರದಕ್ಷಿಣೆಯಾಗಿ 5 ಲಕ್ಷ ರೂ. ಹಣ, 9 ತೊಲೆ ಬಂಗಾರ ನೀಡಲಾಗಿತ್ತು. ಮದುವೆಯಾದ ನಾಲ್ಕು ತಿಂಗಳು ಚೆನ್ನಾಗಿಯೇ ನೋಡಿಕೊಂಡ ಜಗದೀಶ್ ನಾಯ್ಕ ನಂತರ ತನ್ನ ಕಿರುಕುಳ ನೀಡಲು ಪ್ರಾರಂಭಿಸಿದ್ದಾರೆ. ಪ್ರತಿನಿತ್ಯ ಕುಡಿದು ಬಂದು ತವರು ಮನೆಯಿಂದ ಇನ್ನಷ್ಟು ವರದಕ್ಷಿಣೆ ತೆಗೆದುಕೊಂಡು ಬರುವಂತೆ ಕಿರುಕುಳ ನೀಡಲು ಪ್ರಾರಂಭಿಸುತ್ತಾರೆ. ಕೇವಲ ಬೈಯ್ಯುವುದಷ್ಟೇ ಅಲ್ಲದೆ ದೈಹಿಕವಾಗಿ ಹಲ್ಲೆ ನಡೆಸುವುದು, ಬಟ್ಟೆ ಬಿಚ್ಚಿಸಿ ಸಿಗರೇಟಿನಿಂದ ಸುಡುವ ಮೂಲಕ ಹಲ್ಲೆ ನಡೆಸಿದ್ದಾನೆ ಎಂದು ರೋಜಾ ದೂರಿದ್ದಾರೆ.
'ಹೆಣ್ಣು ಮಗು ಹುಟ್ಟಿದ್ದಕ್ಕೆ ಕಿರಿಕ್'
ರೋಜಾ ಹಾಗೂ ರೇಖಾ ಗರ್ಭಿಣಿಯರಾಗಿದ್ದಾಗಲೂ ಸಹ ಕಾಳಜಿವಹಿಸದೆ ಹಿಂಸೆ ನೀಡಲು ಪ್ರಾರಂಭಿಸಿದ್ದಾರೆ. ನಂತರ ಸಹೋದರಿಯರು ಹರಿಗೆಗೆಂದು ತವರು ಮನೆಗೆ ಹೋಗಿದ್ದಾರೆ. ಜಗದೀಶ್ ನಾಯ್ಕ ಪತ್ನಿಗೆ ಹೆಣ್ಣುಮಗು ರವಿ ನಾಯ್ಕ ಪತ್ನಿಗೆ ಗಂಡು ಮಗುವಾಗುತ್ತದೆ. ತನಗೆ ಗಂಡು ಮಗುವಾಗಿಲ್ಲ ಎಂದು ಜಗದೀಶ್ ನಾಯ್ಕ ಮತ್ತೆ ಕಿರಿಕ್ ಪ್ರಾರಂಭಿಸುತ್ತಾರೆ ಎಂದು ಅಳಲು ತೋಡಿಕೊಂಡರು.
'ನಮಗೆ ಇನ್ನಷ್ಟು ವರದಕ್ಷಿಣೆ ಬೇಕು'
ನನ್ನ ತಮ್ಮನಿಗೆ ಸರ್ಕಾರಿ ಕೆಲಸ ಸಿಗುತ್ತದೆ. ನಾವು ಸರ್ಕಾರಿ ಉದ್ಯೋಗ ಮಾಡುವವರು. ನಮಗೆ ಹಣ ಬೇಕು ಎಂದು ಕಿರಿಕ್ ಮಾಡುತ್ತಾರೆ. ತಮಗೆ ಜನಿಸಿದ ಮಕ್ಕಳನ್ನು ಸಹ ಇಬ್ಬರು ಸಹೋದರರು ನೋಡಲು ಹೋಗಿಲ್ಲ. ಅತ್ತೆ ರತ್ನಾಬಾಯಿಯೂ ಸಹ ಚಿತ್ರಹಿಂಸೆ ನೀಡುತ್ತಿದ್ದರಂತೆ. ಒಂದು ದಿನ ದಿಢೀರ್ ಎಂದು ಕಾರಿನಲ್ಲಿ ರೋಜಾ ತವರು ಮನೆಗೆ ಬಂದು ವರದಕ್ಷಿಣೆ ತನ್ನಿ ಎಂದ್ರೆ, ಇಲ್ಲೇ ಕುಳಿತುಕೊಂಡಿದ್ದಿರಾ ಎಂದು ಮನಬಂದಂತೆ ಹಲ್ಲೆ ನಡೆಸಿ, ಕೊಲೆ ಮಾಡಲು ಯತ್ನಿಸಿದ್ದಾರೆ. ಈ ವೇಳೆಗೆ ಗ್ರಾಮಸ್ಥರು ಬಂದು ತಡೆದಿದ್ದಾರೆ ಎಂದು ಹೇಳಲಾಗಿದೆ.
ಪೊಲೀಸ್ ಇಲಾಖೆಯಿಂದ ಯಾವುದೇ ಕ್ರಮವಿಲ್ಲ:
ಕಾನ್ಸ್‌ಟೇಬಲ್ ಜಗದೀಶ್ ನಾಯ್ಕ ಹಾಗೂ ಅವರ ಅಣ್ಣ ರವಿನಾಯ್ಕ ಮೇಲೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ದೂರು ನೀಡಿ ಒಂದು ತಿಂಗಳಾದ್ರೂ ಪೊಲೀಸ್ ಇಲಾಖೆ ಆತನನ್ನು ಬಂಧಿಸಿಲ್ಲ. ಹೆಸರಿಗಷ್ಟೇ ದೂರು ದಾಖಲು ಮಾಡಿಕೊಂಡ ಮಹಿಳಾ ಪೊಲೀಸರು ಸುಮ್ಮನೆ ಕುಳಿತುಕೊಂಡಿದ್ದಾರೆ. ಜಗದೀಶ್ ನಾಯ್ಕ ತಮ್ಮ ಇಲಾಖೆಯವರೆಂದು ಹೀಗೆ ಮಾಡಲಾಗುತ್ತಿದೆ. ನಮಗೆ ನ್ಯಾಯಬೇಕು ಎಂದು ಸಹೋದರಿಯರು ಕಣ್ಣೀರು ಹಾಕುತ್ತಿದ್ದಾರೆ.
ಮಕ್ಕಳ ಮದುವೆಗೆಂದು ಇರುವ ಜಮೀನನ್ನು ಮಾರಿದ್ದೇವೆ. ಸದ್ಯ ಓರ್ವ ಗಂಡು ಮಗನಿದ್ದಾನೆ. ಮುಂದೆ ಆತ ಮದುವೆಯಾದ ಮೇಲೆ ನಾವು ಏನು ಮಾಡಬೇಕು. ನಮಗೆ ನಮ್ಮ ಮಕ್ಕಳ ಭವಿಷ್ಯ ಬೇಕು ಎಂದು ರೋಜಾ ತಾಯಿ ಅಳಲು ತೋಡಿಕೊಂಡರು.