ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನ ನಾಗತಿ ಬೆಳಗಲು ಗ್ರಾಮದಲ್ಲಿ ನಂಜುಂಡೇಶ್ವರ ಸ್ವಾಮಿ ರಥೋತ್ಸವವು ಅತ್ಯಂತ ವಿಜೃಂಭಣೆಯಿಂದ ಸಂಪನ್ನಗೊಂಡಿದೆ. ಗ್ರಾಮದ ನಂಜುಂಡೇಶ್ವರ ಸ್ವಾಮಿ ಎಂದರೆ ಸುತ್ತಮುತ್ತಲಿನ ಭಕ್ತರಿಗೆ ದೇವರ ಜೊತೆಗೆ ಚರ್ಮ ರೋಗಗಳನ್ನು ನಿವಾರಿಸುವ ವೈದ್ಯನಾಗಿದ್ದಾನೆ. ಪ್ರತಿ ವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ನಡೆಯುವ ನಂಜುಂಡೇಶ್ವರನ ಜಾತ್ರೆಗೆ ವಿವಿಧ ಗ್ರಾಮಗಳಿಂದ ಭಕ್ತರು ಆಗಮಿಸುತ್ತಾರೆ.
ಜಾತ್ರೆಯ ವಿಶೇಷ: ಗ್ರಾಮದಲ್ಲಿ ಐದು ದಿನಗಳ ಕಾಲ ನಂಜುಂಡೇಶ್ವರನ ಜಾತ್ರೆ ನಡೆಯುತ್ತದೆ. ಜಾತ್ರೆಗೆ ಆಹ್ವಾನ ನೀಡಲು ಸ್ವತಃ ನಂಜುಂಡೇಶ್ವರ ದೇವರ ಉತ್ಸವ ಮೂರ್ತಿಯು ಅಕ್ಕ ಪಕ್ಕದ ಹಳ್ಳಿಗಳಿಗೆ ಭೇಟಿ ನೀಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ. ಇದರ ಮರುದಿನ ಬೆಳಗ್ಗೆ ಕೆಂಡ ಉತ್ಸವ ನಡೆದರೆ ಸಂಜೆ ರಥೋತ್ಸವ ಜರುಗುತ್ತದೆ.