ಶಿವಮೊಗ್ಗ/ಚಿಕ್ಕಮಗಳೂರು: ಜುಲೈ 14ರಂದು ಶಿವಮೊಗ್ಗದ ವಿನೋಬನಗರದ ಪೊಲೀಸ್ ಠಾಣೆಯ ಮುಂಭಾಗದ ವೃತ್ತದಲ್ಲಿ ಹೊನ್ನಪ್ಪ ಅಲಿಯಾಸ್ ಹಂದಿ ಅಣ್ಣಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಇದಾದ ನಂತರ ಆರೋಪಿಗಳು ತಲೆಮರೆಸಿಕೊಂಡಿದ್ದರು. ಇದೀಗ ಎನ್‌ಕೌಂಟರ್ ಭಯದಿಂದ ಹಂದಿ ಅಣ್ಣಿಯನ್ನು ನಾವೇ ಕೊಲೆ ಮಾಡಿದ್ದು ಎಂದು ತಿಳಿಸಿ ಕಾರ್ತಿಕ್, ನಿತಿನ್, ಮನು, ಫಾರುಕ್, ಚಂದನ್, ಆಂಜನೇಯ, ಮಧುಸೂಧನ್ ಹಾಗು ಮಧು ಸೇರಿ ಒಟ್ಟು ಎಂಟು ಆರೋಪಿಗಳು ತಡರಾತ್ರಿ ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ ಮುಂದೆ ಶರಣಾಗಿದ್ದಾರೆ.
ಎಸ್ಪಿ ಹೇಳಿಕೆ: ಎಸ್.ಪಿ ಅಕ್ಷಯ್ ಪ್ರತಿಕ್ರಿಯಿಸಿ, ಹಂದಿ ಅಣ್ಣಿ ಹತ್ಯೆಗೈದ ಆರೋಪಿಗಳು ಘಟನೆಯನ್ನು ವಿವರಿಸಿದ್ದಾರೆ. ಶಿವಮೊಗ್ಗಕ್ಕೆ ಹೋದರೆ ಭಯವಿದೆ. ಅಲ್ಲಿಗೆ ಹೋಗಲು ಸಾಧ್ಯವಿಲ್ಲ ಎಂದು ತಿಳಿದು ಚಿಕ್ಕಮಗಳೂರಿಗೆ ಬಂದಿದ್ದಾರೆ. ಚಿಕ್ಕಮಗಳೂರಿಗೆ ಯಾಕೆ ಬಂದ್ರು ಎಂಬ ವಿಚಾರವನ್ನೂ ಹೇಳಿದ್ದಾರೆ. ಸಿಕ್ಕಿರುವ ಮಾಹಿತಿ ಪ್ರಕಾರ, ಇವರೇ ಆರೋಪಿಗಳು ಎಂಬುದು ಮೇಲ್ನೋಟಕ್ಕೆ ಖಚಿತವಾಗಿದೆ. ಶಿವಮೊಗ್ಗ ಪೊಲೀಸರಿಗೆ ತಿಳಿಸಲಾಗಿದೆ ಎಂದು ಹೇಳಿದರು. ಆರೋಪಿಗಳನ್ನು ಚಿಕ್ಕಮಗಳೂರು ಕೋರ್ಟ್ ಮುಂದೆ ಹಾಜರುಪಡಿಸಲಿರುವ ಪೊಲೀಸರು ನಂತರ ಶಿವಮೊಗ್ಗ ಪೊಲೀಸರಿಗೆ ಹಸ್ತಾಂತರಿಸಲಿದ್ದಾರೆ.