ಕರ್ನಾಟಕ

karnataka

ETV Bharat / city

ಕೇಂದ್ರದ ನೆರೆ ಪರಿಹಾರ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ: ಸುಂದರೇಶ್ - ಹೆಚ್​. ಎಸ್. ಸುಂದರೇಶ್

ಪ್ರವಾಹ ಪೀಡಿತ ಪ್ರದೇಶಕ್ಕೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಪರಿಹಾರದ ಮೊತ್ತ ತುಂಬಾ ಕಡಿಮೆ ಆಗಿದೆ ಎಂದು ಶಿವಮೊಗ್ಗ ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಹೆಚ್​. ಎಸ್. ಸುಂದರೇಶ್ ನಗರದಲ್ಲಿ​ ಸುದ್ದಿಗೋಷ್ಠಿ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.

ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಹೆಚ್​. ಎಸ್. ಸುಂದರೇಶ್

By

Published : Oct 6, 2019, 4:58 AM IST

ಶಿವಮೊಗ್ಗ:ಪ್ರವಾಹದಿಂದಾಗಿ ರಾಜ್ಯದೆಲ್ಲೆಡೆ 35 ಸಾವಿರ ಕೋಟಿ ರೂ. ನಷ್ಟ ಸಂಭವಿಸಿರುವಾಗ ಕೇಂದ್ರ ಸರಕಾರ ಅಳೆದು ತೂಗಿ ಕೇವಲ 1200 ಕೋಟಿ ರೂ. ಪರಿಹಾರದ ಭರವಸೆ ನೀಡಿದೆ. ಇದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಲೇವಡಿ ಮಾಡಿದರು.

ಕೇಂದ್ರದ ನೆರೆ ಪರಿಹಾರ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ: ಸುಂದರೇಶ್

ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದೆಲ್ಲೆಡೆ ಒಟ್ಟು ಎರಡೂವರೆ ಲಕ್ಷ ಮನೆಗಳು ಸಂಪುರ್ಣ, ಒಂದೂವರೆ ಲಕ್ಷ ಮನೆಗಳು ಭಾಗಶಃ ಹಾನಿಗೊಳಗಾಗಿದೆ. 6 ಸಾವಿರ ಶಾಲೆ, 3 ಸಾವಿರ ಅಂಗನವಾಡಿ ಮತ್ತು 300 ಆಸ್ಪತ್ರೆಗಳು, ಸಾವಿರಾರು ಎಕರೆ ಗದ್ದೆ, ತೋಟ ಮತ್ತು ಬೆಳೆಗಳು ಹಾನಿಗೊಳಗಾಗಿವೆ. ರಾಜ್ಯ ಸರಕಾರ ಮನೆಗೆ 10 ಸಾವಿರ ರೂ.ನಂತೆ 830 ಕೋಟಿ ರೂ. ಪರಿಹಾರ ಕೊಟ್ಟಿರುವುದು ಬಿಟ್ಟರೆ ಬೇರೇನೋ ಕೊಟ್ಟಿಲ್ಲ ಎಂದು ಟೀಕಿಸಿದರು.

ರಾಜ್ಯದಲ್ಲಿ ಬಿಜೆಪಿಯ 25 ಲೋಕಸಭಾ ಸದಸ್ಯರಲ್ಲದೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಾಜೀವ್ ಚಂದ್ರಶೇಖರ್ ಸೇರಿದಂತೆ ಹಲವರು ರಾಜ್ಯಸಭಾ ಸದಸ್ಯರಿದ್ದಾರೆ. ಆದರೆ, ಅವರೆಲ್ಲರೂ ಧ್ವನಿ ಕಳೆದುಕೊಂಡಿದ್ದಾರೆ. ನಮ್ಮೂರಿನವರೇ ಆದ ಯಡಿಯೂರಪ್ಪ ಅವರು ಮತ್ತೊಮ್ಮೆ ಸಿಎಂ ಆದಾಗ ನಾವೆಲ್ಲ ದೊಡ್ಡ ಭರವಸೆ ಇಟ್ಟುಕೊಂಡಿದ್ದೆವು. ಆದರೆ, ಪ್ರಧಾನಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಯಡಿಯೂರಪ್ಪ ಅವರನ್ನು ಅಸಹಾಯಕರನ್ನಾಗಿ ಮಾಡಿದ್ದಾರೆ. ನೆರೆ ಪರಿಹಾರ ಕೇಳಲು ಕಾಂಗ್ರೆಸ್ ಮತ್ತು ಜೆಡಿಎಸ್‌ನವರು ಒಟ್ಟಾಗಿ ಬರುತ್ತೇವೆ ಎಂದರೂ ಕರೆದೊಯ್ಯುವ ಧೈರ್ಯ ಅವರಿಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯಗಳಿಗೆ ಪರಿಹಾರ ಕೊಡಲು ಕೇಂದ್ರ ಸರ್ಕಾರದ ಬಳಿ ಹಣ ಇಲ್ಲ. ರಾಜ್ಯದ ಬೊಕ್ಕಸ ಖಾಲಿಯಾಗಿದೆ ಎಂದು ಯಡಿಯೂರಪ್ಪ ಅವರೇ ಒಪ್ಪಿಕೊಂಡಿದ್ದಾರೆ. ಇದು ದೇಶವನ್ನು ಇವರು ಸಂಕಷ್ಟದತ್ತ ಕೊಂಡೊಯ್ಯುತ್ತಿರುವುದಕ್ಕೆ ಸಾಕ್ಷಿಯಾಗಿದೆ. ದೇಶದ ಆರ್ಥಿಕ ಪರಿಸ್ಥಿತಿ ಕುಸಿದಿದೆ. 1 ಲಕ್ಷ 76 ಸಾವಿರ ಕೋಟಿ ರೂ. ರಿಸರ್ವ್ ಬ್ಯಾಂಕ್​ನಿಂದ ಪಡೆದು ಈಗ ಮತ್ತೆ 30 ಸಾವಿರ ಕೋಟಿ ರೂ. ಕೇಳುತ್ತಿದ್ದಾರೆ. ದೇಶದಲ್ಲಿ ಹಿಂದೆಂದೂ ಇಂತಹ ಪರಿಸ್ಥಿತಿ ಬಂದಿರಲಿಲ್ಲ. ರಿಸರ್ವ್ ಬ್ಯಾಂಕ್ ಹಣವನ್ನು ಬಳಸಿಕೊಳ್ಳುವುದು ಎಂದರೆ ದೇಶದ ಆರ್ಥಿಕ ಸ್ಥಿತಿಯನ್ನು ಅಧೋಗತಿಗೆ ತಳ್ಳಿದಂತೆ ಎಂದು ಆರೋಪಿಸಿದರು.

ಪಾಕಿಸ್ತಾನದ ವಿಷಯ ಹೇಳಿಕೊಂಡು ತಿರುಗುವ ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರಿಗೆ ದೇಶದೊಳಗಿನ ಪ್ರವಾಹ, ನೆರೆ, ಬೆಳೆ ಹಾನಿ, ಆರ್ಥಿಕ ಹಿಂಜರಿತದ ಬಗ್ಗೆ ತಿರುಗಿ ನೋಡುವ ವ್ಯವಧಾನವಿಲ್ಲ. ದೇಶದ ಆರ್ಥಿಕ ಸ್ಥಿತಿಗತಿಗಳನ್ನ ಸುಧಾರಿಸುವ ನಿಟ್ಟಿನಲ್ಲಿ ಬಿಜೆಪಿ ಕೆಲಸ ಮಾಡದಿದ್ದರೆ ಹಾಗೂ ನೆರೆ ಪರಿಹಾರ ಹಣವನ್ನ ನೀಡದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಬೀದಿಗಿಳಿಯಲಿದೆ ಎಂದು ಸುಂದರೇಶ್​ ಎಚ್ಚರಿಕೆ ನೀಡಿದರು.

ಸಿಎಂ ಜಿಲ್ಲೆಯಲ್ಲೇ ಬಯಲು ಶೌಚ

ಇನ್ನು ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಶೌಚಾಲಯಗಳನ್ನು ನಿರ್ಮಿಸಿದ ಬಗ್ಗೆ ಅಮೆರಿಕಾದಲ್ಲಿ ಹೇಳಿಕೊಂಡು ದೇಶವನ್ನು ಬಯಲು ಶೌಚ ಮುಕ್ತವೆಂದು ಘೋಷಿಸಿದ್ದಾರೆ. ಆದರೆ, ಕೆಲವು ಸಂಸ್ಥೆ ಗಳು ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ನಾಡು ಎಷ್ಟರ ಮಟ್ಟಿಗೆ ಬಯಲು ಶೌಚ ಮುಕ್ತವಾಗಿದೆ ಎಂಬುದು ಬಯಲಿಗೆ ಬಂದಿದೆ. ಸಿಎಂ ಯಡಿಯೂರಪ್ಪ ತವರು ಜಿಲ್ಲೆಯಲ್ಲೇ 11 ಸಾವಿರ ಶೌಚಾಲಯ ರಹಿತ ಕುಟುಂಬಗಳಿವೆ ಎಂಬುದು ಮೋದಿ ಅವರಿಗೆ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.

ABOUT THE AUTHOR

...view details