ಶಿವಮೊಗ್ಗ :ಕೋವಿಡ್ನ ಎರಡು ಅಲೆಗಳು ಬಂದಾಗ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಸಿಗೆಗಳೇ ಸಿಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ವೆಂಟಿಲೇಟರ್, ಆಕ್ಸಿಜನ್, ಸೂಕ್ತ ವೈದ್ಯಕೀಯ ಸೇವೆಗಳು ಸಿಗದೇ ಅದೆಷ್ಟೋ ರೋಗಿಗಳು ಮೃತಪಟ್ಟಿದ್ದರು.
ಕೋವಿಡ್ ಮೂರನೇ ಅಲೆ ಇನ್ನೂ ಭೀಕರ ಸನ್ನಿವೇಶ ಸೃಷ್ಟಿಯಾಗಬಹುದು ಎಂದು ಎಲ್ಲರೂ ಆತಂಕದಲ್ಲಿದ್ದರು. ಆದರೆ, ಶಿವಮೊಗ್ಗ ಜಿಲ್ಲೆಯಲ್ಲಿ ಕೊವಿಡ್ ಹೆಚ್ಚಳಗೊಂಡಿದ್ದರೂ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇದೆ.
ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸಬೇಕು ಎಂಬ ಕಾರಣಕ್ಕೆ ಜಿಲ್ಲಾಡಳಿತ ಎಲ್ಲ ಅಗತ್ಯ ವ್ಯವಸ್ಥೆ ಮಾಡಿಕೊಂಡಿತ್ತು. ಜೊತೆಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಒಂದು ಸಾವಿರ ಬೆಡ್ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲೆಯಲ್ಲಿ ಕೋವಿಡ್ ಮೂರನೇ ಅಲೆ ಬರುತ್ತಿದ್ದಂತೆ ನಿರೀಕ್ಷೆಗೂ ಮೀರಿ ಕೋವಿಡ್ ಪ್ರಕರಣ ಪತ್ತೆಯಾಗಲಾರಂಭಿಸಿದ್ದವು.
ಆಸ್ಪತ್ರೆಗಳತ್ತ ಮುಖ ಮಾಡದ ಜನ.. ಈ ಬಗ್ಗೆ ಡಿಸಿ ಆರ್ ಸೆಲ್ವಮಣಿ ಮಾಹಿತಿ ನೀಡಿರುವುದು.. ಆದರೆ, ಕೋವಿಡ್ ಬಂದವರು ಮಾತ್ರ ಆಸ್ಪತ್ರೆಗೆ ಬಂದು ದಾಖಲಾಗಲೇ ಇಲ್ಲ. ಬದಲಿಗೆ ಕ್ಲಿನಿಕ್ಗಳಿಗೆ ತೆರಳಿ ವೈದ್ಯರ ಸಲಹೆ ಪಡೆದು ಅಗತ್ಯ ಔಷಧಿಗಳನ್ನು ಪಡೆದು ಹೋಂ ಐಸೋಲೇಷನ್ ಮೊರೆ ಹೋಗಿದ್ದಾರೆ. ಹೀಗಾಗಿ, ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ಖಾಸಗಿ ಆಸ್ಪತ್ರೆಗೆ ಕೋವಿಡ್ ಕಾರಣಕ್ಕೆ ದಾಖಲಾಗುವವರ ಸಂಖ್ಯೆ ತೀರಾ ಕಡಿಮೆ ಇದೆ.
ಮೂರನೇ ಅಲೆ ಆರಂಭದಲ್ಲಿ ಜಿಲ್ಲೆಯಲ್ಲಿ ಪ್ರತಿದಿನ 300ಕ್ಕೂ ಹೆಚ್ಚು ಕೋವಿಡ್ ಪ್ರಕರಣ ದಾಖಲಾಗಿವೆ. ಪ್ರಸ್ತುತ ಶಿವಮೊಗ್ಗ ಜಿಲ್ಲೆಯಲ್ಲಿ ಕೋವಿಡ್ ಸಕ್ರಿಯ ಪ್ರಕರಣ ಎರಡೂವರೆ ಸಾವಿರಕ್ಕೂ ಹೆಚ್ಚಿವೆ. ಆದರೆ, ಆಸ್ಪತ್ರೆಗೆ ದಾಖಲಾಗಿರುವವರು ಮಾತ್ರ ಕೇವಲ 69 ಜನ ಮಾತ್ರ. ಈ 69 ಜನರಲ್ಲಿ ಬೇರೆ ಆರೋಗ್ಯದ ಸಮಸ್ಯೆ ಇರುವ 20 ಜನರಿಗೆ ಮಾತ್ರ ಆಕ್ಸಿಜನ್, ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ:ರಾಜಕಾರಣದಲ್ಲಿ ಯತ್ನಾಳ್ ಜೂನಿಯರ್ : ಮಾಜಿ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ
ಮೊದಲೆರಡು ಅಲೆಗಳಂತೆ ಕೋವಿಡ್ ಮೂರನೇ ಅಲೆ ಹೆಚ್ಚಿನ ಪರಿಣಾಮವನ್ನು ಬೀರಿಲ್ಲ. ಜನರಿಗೆ ಕೋವಿಡ್ ಬಗ್ಗೆ ಈ ಹಿಂದಿದ್ದ ಭಯವೂ ಇಲ್ಲದಂತಾಗಿದೆ. ಹೀಗಾಗಿಯೇ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಕಡಿಮೆಯಾಗಿದೆ.