ಕರ್ನಾಟಕ

karnataka

ETV Bharat / city

ಕೊರೊನಾ ಲಾಕ್​ಡೌನ್​ ನಡುವೆ ಶಿವಮೊಗ್ಗ ನಗರ ಪಾಲಿಕೆಯಿಂದ ಆಯವ್ಯಯ ಮಂಡನೆ..

ರಾಜ್ಯದಲ್ಲಿ 144 ಸೆಕ್ಷನ್ ಜಾರಿಯಾಗಿ ಲಾಕ್​ಡೌನ್​ ಪರಿಸ್ಥಿತಿಯಲ್ಲಿದ್ದರೆ ಶಿವಮೊಗ್ಗ ನಗರ ಮಹಾನಗರ ಪಾಲಿಕೆ 2020-21ನೇ ಸಾಲಿನ ಆಯವ್ಯಯ ಮಂಡನೆ ಮಾಡಿತು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ ಎಸ್ ಈಶ್ವರಪ್ಪನವರು ಕೂಡಾ ಉಪಸ್ಥಿತರಿದ್ದರು. ವಿರೋಧ ಪಕ್ಷದವರ ವಿರೋಧದ ನಡೆವೆಯೂ ಆಯವ್ಯಯ ಮಂಡನೆಯಾಯ್ತು.

shivamogga-corporation-budget
ಶಿವಮೊಗ್ಗ ನಗರ ಪಾಲಿಕೆ

By

Published : Mar 28, 2020, 7:59 PM IST

ಶಿವಮೊಗ್ಗ:ಮಹಾನಗರ ಪಾಲಿಕೆಯ 2020-21ನೇ ಸಾಲಿನ ಆಯವ್ಯಯ ಮಂಡನೆಯಾಗಿದೆ. ಇದು2.20 ಕೋಟಿ ರೂ. ಉಳಿತಾಯದ ಬಜೆಟ್. ಇಂದು ಪಾಲಿಕೆ ಸಭಾಂಗಣದಲ್ಲಿ ಮೇಯರ್ ಸುವರ್ಣ ಶಂಕರ್ ಅಧ್ಯಕ್ಷತೆಯಲ್ಲಿ ಆಯವ್ಯಯ ಸಭೆ ಶುರುವಾಗ್ತಿದ್ದಂತೆಯೇ ವಿರೋಧ ಪಕ್ಷದ ಸದಸ್ಯರು ಆಯವ್ಯಯ ಮಂಡನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ದೇಶದ್ಯಾಂತ ಕೊರೊನಾ ಭೀತಿ‌ ಎದುರಾಗಿದೆ. ಈ ವೇಳೆ ಪಾಲಿಕೆಯ ಬಜೆಟ್ ಮಂಡನೆ ಅವಶ್ಯಕತೆ ಇರಲಿಲ್ಲ ಎಂದು ಪ್ರತಿಭಟಿಸಿದರು.

ಪ್ರತಿಪಕ್ಷದವರ ವಿರೋಧದ ನಡುವೆಯೂ ಪಾಲಿಕೆ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ವಿಶ್ವನಾಥ್ 2020-21ನೇ ಸಾಲಿನ ಆಯವ್ಯಯ ಮಂಡಿಸಿದರು. ವಿರೋಧ ಪಕ್ಷದವರು ಸಭಾಂಗಣದ ಮುಂಭಾಗ ಬಂದು ಪ್ರತಿಭಟನೆ ನಡೆಸಿ, ಬಜೆಟ್ ಸಭೆಯಿಂದ ಹೊರ ನಡೆದರು. ಈ ಸಾಲಿನಲ್ಲಿ ಪಾಲಿಕೆಗೆ 27953.80 ಲಕ್ಷ ರೂ. ವಿವಿಧ ಮೂಲಗಳಿಂದ ಆದಾಯ ದೊರಕಲಿದೆ. ಇದರಲ್ಲಿ10185.65 ಲಕ್ಷ ರೂ. ಆರಂಭಿಕ ಶುಲ್ಕ, 10750.91 ಲಕ್ಷ ರೂ. ರಾಜಸ್ವ ಜಮೆ, 5444 ಲಕ್ಷ ರೂ. ಬಂಡವಾಳ ಜಮೆ ಒಳಗೊಂಡಿದೆ. 1573.24 ಲಕ್ಷ ರೂ. ಅಸಾಧಾರಣ ಜಮಾ ಆಗಿರುತ್ತದೆ. ಹಾಗೆಯೇ ವಿವಿಧ ಯೋಜನೆ ಹಾಗೂ ಕಾಮಗಾರಿಗಳಿಗಾಗಿ 27734.10 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ.

2019-20ನೇ ಸಾಲಿನಲ್ಲಿ ಅತಿವೃಷ್ಟಿಯಿಂದಾಗಿ ಶಿವಮೊಗ್ಗ ಜನತೆ ಹಲವು ಸಂಕಷ್ಟಗಳನ್ನು ಅನುಭವಿಸಬೇಕಾಯಿತು. ಇದನ್ನು ಮನಗಂಡು 2020- 21ನೇ ಸಾಲಿನ ಆಯವ್ಯಯದಲ್ಲಿ ನಗರದ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ಹಾಗೂ ನಗರದ ಉದ್ಯಾನವನಗಳಲ್ಲಿ ವಿವಿಧ ಯೋಜನೆಗಳನ್ನು ಕ್ರೂಢೀಕರಿಸಿ 5 ಕೋಟಿ ರೂ. ಮೀಸಲಿರಿಸಲಾಗಿದೆ.

ಕೊರೊನಾ ಲಾಕ್​ಡೌನ್​ ನಡುವೆ ಪಾಲಿಕೆಯಿಂದ ಆಯವ್ಯಯ ಮಂಡನೆ..

ಕೆರೆಗಳ ಕಾಯಕಲ್ಪ:ಕಳೆದ ಸಾಲಿನಲ್ಲಿ ಅತಿವೃಷ್ಟಿಯಿಂದ ಕೆರೆಗಳ ನೀರು ಸಮರ್ಥ ರೀತಿ ನಿರ್ವಹಣೆ ಮಾಡಲು ಸಾಧ್ಯವಾಗದೆ ಅನೇಕ ಬಡಾವಣೆಗಳು ಭಾಗಶಃ ಮುಳುಗಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಇದನ್ನು ಮನಗಂಡು ಪಾಲಿಕೆ ವ್ಯಾಪ್ತಿಯ 10 ಕೆರೆಗಳನ್ನ ಆದ್ಯತೆ ಮೇರೆಗೆ ಮೊದಲ ಹಂತವಾಗಿ ಸಂಪೂರ್ಣ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ. ಇದರಲ್ಲಿ ಪಾಲಿಕೆಯ ಅನುದಾನದಲ್ಲಿ 5 ಕೆರೆಗಳನ್ನು ಮತ್ತು ಸಾರ್ವಜನಿಕರ ಸಹಭಾಗಿತ್ವದಲ್ಲಿ 5 ಕೆರೆಗಳನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ 1 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ.

ಪೌರ ಕಾರ್ಮಿಕರ ಕಲ್ಯಾಣ ಯೋಜನೆ :ಪೌರ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಈ ಬಾರಿಯ ಆಯವ್ಯಯದಲ್ಲಿ 30 ಲಕ್ಷ ರೂ. ಗಳನ್ನು ಕಾಯ್ದಿರಿಸಲಾಗಿದೆ. ಡಿ ವೃಂದ ನೌಕರರು, ಹೊರಗುತ್ತಿಗೆ ಅಡಿ ದುಡಿಯುತ್ತಿರುವ ಪೌರಕಾರ್ಮಿಕರು, ಲೋಡರ್ಸ್, ಕ್ಲೀನರ್, ಡ್ರೈವರ್, ಒಳಚರಂಡಿ ಕೆಲಸಗಾರರು ಒಳಗೊಂಡಂತೆ 50 ಸಾವಿರ ರೂ. ಸಹಾಯಧನ ವಿಸ್ತರಿಸಲು ಉದ್ದೇಶಿಸಲಾಗಿದೆ. ಸ್ಥಳೀಯ ಸಂಸ್ಥೆಗಳ ಅಂತರ ವಲಯಗಳಲ್ಲಿ ನಡೆಯುವ ನೌಕರರ ಕ್ರೀಡಾಕೂಟಕ್ಕೆ ನೌಕರರು ಭಾಗವಹಿಸಲು ಎರಡು ಲಕ್ಷ ರೂ. ಗಳನ್ನು ಕಾಯ್ದಿರಿಸಲಾಗಿದೆ‌. ಜೊತೆಗೆ ಸ್ವಚ್ಛತಾ ಕಾರ್ಯ ನಿರ್ವಹಿಸುವ ಕಾಯಂ ನೌಕರರಿಗೆ ಸಮವಸ್ತ್ರ ನೀಡುವ ಯೋಜನೆ ಇದ್ದು, ಅದರಂತೆ ಎಲ್ಲರಿಗೂ ಅವಕಾಶ ಕಲ್ಪಿಸಿಕೊಡುವ ದೃಷ್ಟಿಯಿಂದ ಎಲ್ಲ ಹೊರಗುತ್ತಿಗೆ ನೌಕರರಿಗೂ ಸಮವಸ್ತ್ರ ನೀಡಲು ಅವಕಾಶ ಕಲ್ಪಿಸಲಾಗಿದೆ.

ವಿಮಾ ಯೋಜನೆ :ಪಾಲಿಕೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ ಜತೆಗೆ ಈ ಬಾರಿ ಮಹಾ ನಗರಪಾಲಿಕೆಯ ಎಲ್ಲಾ ಸದಸ್ಯರಿಗೂ ಆರೋಗ್ಯ ಹಿತದೃಷ್ಟಿಯಿಂದ ಆರೋಗ್ಯವಿಮೆ ಜಾರಿಗೊಳಿಸಲಾಗಿದೆ. ಅಲ್ಲದೆ ಸದರಿ ಯೋಜನೆಗೆ 50 ಲಕ್ಷದ ರೂ. ಗಳನ್ನು ಮೀಸಲಿರಿಸಲಾಗಿದೆ. ಪಾಲಿಕೆಯ ಸ್ವಚ್ಛತಾ ಕಾರ್ಯ ನಿರ್ವಹಿಸುವ ಎಲ್ಲಾ ಕಾರ್ಮಿಕರಿಗೆ ಅಪಘಾತ ವಿಮಾ ಪಾಲಿಸಿಯನ್ನು ನೀಡಲು ಉದ್ದೇಶಿಸಲಾಗಿದೆ.

ಪ್ಲಾಸ್ಟಿಕ್ ಮುಕ್ತ ಶಿವಮೊಗ್ಗ:ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ಪ್ಲಾಸ್ಟಿಕ್ ಉತ್ಪಾದನೆ ಮತ್ತು ಬಳಕೆ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ನಾಗರಿಕರಿಗೆ ಹಾಗೂ ಪರಿಸರಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಅರಿವು ಹಾಗೂ ಜಾಹೀರಾತು ಮೂಲಕ ಮಾಹಿತಿ ನೀಡಲು 10 ಲಕ್ಷ ರೂ. ಮೀಸಲಿಟ್ಟಿದೆ.

ಕೆಳದಿ ಚೆನ್ನಮ್ಮ ಪ್ರಶಸ್ತಿ :ಪಾಲಿಕೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ ದಿನ ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 3 ಮಹಿಳೆಯರನ್ನು ಗುರುತಿಸಿ ಕೆಳದಿ ಚೆನ್ನಮ್ಮ ಪ್ರಶಸ್ತಿ ನೀಡಲು ಉದ್ದೇಶಿಸಲಾಗಿದೆ. ಪ್ರಶಸ್ತಿಯು ತಲಾ 10 ಸಾವಿರ ರೂ. ನಗದು ಹಾಗೂ ಪಾರಿತೋಷಕ ಒಳಗೊಂಡಿರುತ್ತದೆ.

ವಾಣಿಜ್ಯ ಸಂಕೀರ್ಣ ನಿರ್ಮಾಣ :ಪಾಲಿಕೆ ಆದಾಯ ಹೆಚ್ಚು ಮಾಡುವ ಉದ್ದೇಶದಿಂದ ಗಾಂಧಿಬಜಾರ್, ಸೀಗೆಹಟ್ಟಿ, ಮಂಡಕ್ಕಿ ಭಟ್ಟಿ, ವಿನಾಯಕ ಟಾಕೀಸ್ ಪಕ್ಕ, ಗಾಂಧಿನಗರ ಉದ್ಯಾನವನದಲ್ಲಿರುವ ನಿವೇಶನಗಳಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲು ತೀರ್ಮಾನಿಸಿದೆ.

ಮುಖ್ಯರಸ್ತೆ ಸೌಂದರ್ಯೀಕರಣ:ಪಾಲಿಕೆ ವ್ಯಾಪ್ತಿಯ ಮುಖ್ಯರಸ್ತೆಗಳು ಸೌಂದರ್ಯದಿಂದ ಕಂಗೊಳಿಸುವಂತೆ ಮಾಡುವ ಉದ್ದೇಶದಿಂದ ಶಿವಮೊಗ್ಗ ಸರ್ಕಾರಿ ಬಸ್ ನಿಲ್ದಾಣದಿಂದ ಮಲಗೊಪ್ಪದ ಪಾಲಿಕೆ ಗಡಿವರೆಗೆ ಬಿ ಹೆಚ್‌ ರಸ್ತೆಯನ್ನು ಅಭಿವೃದ್ಧಿಪಡಿಸಲು 50 ಲಕ್ಷ ರೂ. ಮೀಸಲಿಡಲಾಗಿದೆ.

ವಸತಿ ಗೃಹ ನಿರ್ಮಾಣ :ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ- ಸಿಬ್ಬಂದಿಗೆ ವಸತಿ ಗೃಹಗಳನ್ನು ನಿರ್ಮಿಸುವ ಸಲುವಾಗಿ 2 ಕೋಟಿ ರೂ. ಮೀಸಲಿಡಲಾಗಿದೆ. ಜೊತೆಗೆ ಪಾಲಿಕೆ ಆವರಣದಲ್ಲಿ ಸಮಾಲೋಚನಾ ಕೊಠಡಿ ನಿರ್ಮಾಣಕ್ಕಾಗಿ 50 ಲಕ್ಷ ರೂ. ತೆಗೆದಿರಿಸಲಾಗಿದೆ. ಬಿಡಾಡಿ ಪ್ರಾಣಿಗಳ ನಿರ್ಬಂಧ ಹಾಗೂ ಗೋವುಗಳ ಸಂರಕ್ಷಣೆ, ಪ್ರಾಣಿಗಳಿಗೆ ಉಚಿತ ಆರೋಗ್ಯ ತಪಾಸಣೆ ಮಾಡಲು ಮತ್ತು ಗೋವು ಹಾಗೂ ಇತರ ಜಾನುವಾರುಗಳಿಗೆ ಅಲ್ಟ್ರಾಸೌಂಡ್ ಉಪಕರಣ ಅಳವಡಿಸುವ ಕಾರ್ಯಕ್ರಮಗಳನ್ನೂ ಪಶುಸಂಗೋಪನಾ ಇಲಾಖೆ ಸಹಭಾಗಿತ್ವದಲ್ಲಿ ಅನುಷ್ಠಾನ ಮಾಡಲು 50 ಲಕ್ಷ ರೂ.ಗಳನ್ನು ಮೀಸಲಿಟ್ಟಿದೆ.

ನಗರದ ಸಂತೆ ಮೈದಾನವನ್ನು ಸುಸಜ್ಜಿತವಾಗಿ ಅಭಿವೃದ್ಧಿಪಡಿಸಿ ವ್ಯಾಪಾರಸ್ಥರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲ ಮಾಡುವ ಸಲುವಾಗಿ 3 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಪಾಲಿಕೆಯ ಸ್ವತ್ತುಗಳನ್ನು ದುರುಪಯೋಗ ವಾಗದಂತೆ ತಡೆಯಲು ಸ್ವತ್ತುಗಳಿಗೆ ಫೆನ್ಸಿಂಗ್ ಅಳವಡಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ. ಬಂದರು ಮತ್ತು ಮೀನುಗಾರಿಕೆ ಇಲಾಖೆ ಸಹಕಾರದೊಂದಿಗೆ ಸುಸಜ್ಜಿತ ಹಾಗೂ ಆಧುನಿಕ ಮೀನು ಮತ್ತು ಮಾಂಸದ ಮಾರುಕಟ್ಟೆ ನಿರ್ಮಾಣ ಮಾಡಲು 50 ಲಕ್ಷ ರೂ. ಅತ್ಯಾಧುನಿಕ ಕಸಾಯಿಖಾನೆ ನಿರ್ಮಾಣ ಮಾಡಲು ಮೊದಲ ಹಂತವಾಗಿ 25 ಲಕ್ಷ ರೂ. ಮೀಸಲಿಡಲು ಉದ್ದೇಶಿಸಲಾಗಿದೆ.

ಘನತ್ಯಾಜ್ಯ ವಿಂಗಡನೆ :ಪಾಲಿಕೆ ವ್ಯಾಪ್ತಿಯಲ್ಲಿ ನಿತ್ಯ 152 ಟನ್ ಕಸ ಉತ್ಪಾದನೆಯಾಗುತ್ತಿದೆ. ಅದನ್ನು ವಿಲೇವಾರಿ ಘಟಕಕ್ಕೆ ಸಾಗಿಸುವ ಹೊರೆ ಕಡಿಮೆಗೊಳಿಸುವ ದೃಷ್ಟಿಯಿಂದ ಮನೆಗಳಲ್ಲಿ ಉತ್ಪಾದನೆಯಾಗುವ ಹಸಿ ಮತ್ತು ಒಣ ಕಸಗಳನ್ನು ಪ್ರತ್ಯೇಕಗೊಳಿಸಿ ಗೊಬ್ಬರ ಬಳಕೆ ಮಾಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ವಾರ್ಡ್ ಕಚೇರಿ, ಏರಿಯಾ ಸಭಾ ಮತ್ತು ವಾರ್ಡ್ ಕಮಿಟಿ ರಚನೆ, ಅಬ್ದುಲ್ ಕಲಾಂ ವಿಶಿಷ್ಟ ಚೇತನ ಕ್ಷೇಮಾಭಿವೃದ್ಧಿ ಯೋಜನೆ, ಪಂಡಿತ್ ದೀನದಯಾಳ್ ಹೃದಯಸ್ಪರ್ಶಿ ಯೋಜನೆ, ಅಜಿತಶ್ರೀ ಸೇವಾ ಯೋಜನೆ, ಲವಕುಶ ಮಕ್ಕಳ ಕಲ್ಯಾಣ ಯೋಜನೆ, ಸಾಂಸ್ಕೃತಿಕ ಸುರಕ್ಷಾ ಯೋಜನೆ, ಶ್ರೀ ಸಿದ್ಧಗಂಗಾ ಶಿವಕುಮಾರ ಸ್ವಾಮಿಗಳ ಸ್ಮರಣಾರ್ಥ ಶ್ರೀ ಸಿದ್ಧಗಂಗಾ ಶ್ರೀ ವಿದ್ಯಾ ಸರಸ್ವತಿ ಯೋಜನೆ ಮುಂದುವರಿಸಲು ಹಣ ಮೀಸಲಿಡಲಾಗಿದೆ.

ABOUT THE AUTHOR

...view details