ಶಿವಮೊಗ್ಗ: 2021 ರಾಜ್ಯದಲ್ಲಿ ಹಲವು ಪ್ರಮುಖ ಘಟನೆಗಳಿಗೆ ಸಾಕ್ಷಿಯಾಗಿದೆ. ಅದೇ ರೀತಿಯಲ್ಲಿ ಜಿಲ್ಲೆಗಳಲ್ಲೂ ಕೂಡಾ ಅನೇಕ ಪ್ರಮುಖ ಘಟನಗಳು ನಡೆದಿವೆ. ಬಿಎಸ್ವೈ ಸಿಎಂ ಆಗಿದ್ದಾಗ, ರಾಜ್ಯ ರಾಜಕಾರಣದ ಕೇಂದ್ರ ಬಿಂದು ಎನಿಸಿಕೊಂಡ ಶಿವಮೊಗ್ಗದಲ್ಲಿ 2021ರಲ್ಲಿ ನಡೆದ ಕೆಲವು ಘಟನೆಗಳು ಇಲ್ಲಿವೆ..
- ರಾಜ್ಯ ಬಿಜೆಪಿಯ ಕೋರ್ ಕಮಿಟಿ ಸಭೆ:ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ರಾಜ್ಯದ ಎಲ್ಲಾ ಭಾಗಗಳಲ್ಲಿ ಕೋರ್ ಕಮಿಟಿ ಸಭೆ ನಡೆಸಬೇಕೆಂದು ಶಿವಮೊಗ್ಗದಲ್ಲಿ ನಡೆಸಿದ್ದರು. ಮೊದಲ ದಿನ ಖಾಸಗಿ ಹೋಟೆಲ್ನಲ್ಲಿ ಜನವರಿ 1ರ ಸಂಜೆ ಸಭೆ ನಡೆಯಿತು. ನಂತರ ಯಡಿಯೂರಪ್ಪ ಒಡೆತನದ ಕಾಲೇಜು ಆವರಣದಲ್ಲಿ ಸಭೆ ನಡೆಯಿತು. ಕೋರ್ ಕಮಿಟಿ ಸಭೆಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಜೊತೆ ಯಡಿಯೂರಪ್ಪ, ಸೇರಿದಂತೆ ಕೋರ್ ಕಮಿಟಿ ಸದಸ್ಯರು ಭಾಗವಹಿಸಿದ್ದರು.
- ಆರ್ಎಎಫ್ ಬೆಟಾಲಿಯನ್ಗೆ ಅಮಿತ್ ಶಾ ಶಂಕುಸ್ಥಾಪನೆ:ಜನವರಿ 15ರಂದು ರಾಜ್ಯದ ಪ್ರಥಮ ಆರ್ಎಎಫ್ ಬೆಟಾಲಿಯನ್ ಅನ್ನು ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಸ್ಥಾಪನೆ ಮಾಡಲು ಕೇಂದ್ರದ ಅಮಿತ್ ಶಾ ಆಗಮಿಸಿ, ಗುದ್ದಲಿ ಪೊಜೆ ನೇರವೇರಿಸಿದ್ದರು. ಇದು ಕರ್ನಾಟಕದ ಮೊದಲ ರ್ಯಾಪಿಡ್ ಆ್ಯಕ್ಷನ್ ಫೋರ್ಸ್ನ ಮೊದಲ ಬೆಟಾಲಿಯನ್ ಆಗಲಿದೆ. ಇದಕ್ಕಾಗಿ ರಾಜ್ಯ ಪೊಲೀಸ್ ಇಲಾಖೆಯ 10 ಎಕರೆ ಭಾಗವನ್ನು ನೀಡಲಾಯಿತು. ತುರ್ತು ಪರಿಸ್ಥಿತಿ, ಗಲಭೆ ಸಂದರ್ಭದಲ್ಲಿ ಬಳಕೆಗೆ ಬೆಟಾಲಿಯನ್ ಸ್ಥಾಪನೆ ಮಾಡಲಾಗಿದೆ. ಇದು ಕರ್ನಾಟಕ ಹಾಗೂ ಕೇರಳ ರಾಜ್ಯದ ವ್ಯಾಪ್ತಿಗೆ ಒಳಪಡಲಿದೆ.
- ಕಲ್ಲು ಕ್ವಾರಿಯಲ್ಲಿ ಸ್ಫೋಟದಲ್ಲಿ ಆರು ಸಾವು:ಜನವರಿ 21ರಂದು ಶಿವಮೊಗ್ಗ ತಾಲೂಕು ಹುಣಸೋಡು ಗ್ರಾಮದ ಕಲ್ಲು ಕ್ವಾರಿಯಲ್ಲಿ ಕ್ವಾರಿಗೆ ಬಳಸುವ ಸ್ಪೋಟಕಗಳು ತುಂಬಿದ ಮೂರು ವಾಹನಗಳು ಸ್ಪೋಟಗೊಂಡು ಆರು ಜನ ಮಂದಿ ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಸುಮಾರು 15 ಜನರ ಬಂಧನವಾಗಿತ್ತು. ಕಲ್ಲು ಕ್ವಾರಿಯ ಜಾಗದ ಮಾಲೀಕ, ಕ್ವಾರಿ ನಡೆಸುವವರು, ಮ್ಯಾನೇಜರ್, ಸ್ಪೋಟಕ ನೀಡಿದವರು ಹೀಗೆ ಒಟ್ಟು 15 ಜನರನ್ನು ಬಂಧಿಸಲಾಗಿದೆ. ಕೆಲವರಿಗೆ ಈಗ ಜಾಮೀನು ಸಿಕ್ಕಿದೆ. ಇನ್ನೂ ಸ್ಪೋಟದ ಶಬ್ದ ಶಿವಮೊಗ್ಗ ಜಿಲ್ಲೆ ಅಲ್ಲದೆ, ಚಿಕ್ಕಮಗಳೂರು ಹಾಗೂ ದಾವಣಗೆರೆ ಜಿಲ್ಲೆಗೆ ಕೇಳಿಸಿತ್ತು.
- ದಕ್ಷಿಣ ಭಾರತದ ಪ್ರಥಮ ರೈತ ಪಂಚಾಯತ್: ಕೇಂದ್ರದ ರೈತ ವಿರೋಧಿ ಕಾಯ್ದೆಯನ್ನು ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಿತ್ತು. ಇದರ ಹೋರಾಟವನ್ನು ವಿಸ್ತರಿಸಲು ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ರೈತ ಮಹಾ ಪಂಚಾಯತ್ ಸಮಾವೇಶವನ್ನು ಮಾರ್ಚ್ 20ರಂದು ಶಿವಮೊಗ್ಗದಲ್ಲಿ ನಡೆಸಲಾಯಿತು. ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಬಿಜೆಪಿ ಹೊರತು ಪಡಿಸಿ, ಉಳಿದ ಎಲ್ಲಾ ರಾಜಕೀಯ ಪಕ್ಷಗಳು ಭಾಗಿಯಾಗಿದ್ದವು.
- 10 ಸಮುದಾಯ ರೇಡಿಯೋಗೆ ಅನುಮೋದನೆ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಥಮ ಸಮುದಾಯ ರೇಡಿಯೋಗೆ ಕೇಂದ್ರ ಅನುಮತಿ ನೀಡಿತ್ತು. ಈ ಮೂಲಕ ಶಿವಮೊಗ್ಗ ಜಿಲ್ಲೆಯಲ್ಲೂ ಸಹ ಎಫ್‌ಎಂ ರೇಡಿಯೋ ಕೇಳುವ ಭಾಗ್ಯ ಶಿವಮೊಗ್ಗ ಜನತೆಗೆ ಲಭ್ಯವಾಗಿದೆ. ರೇಡಿಯೋ ಪ್ರಾರಂಭದ ಕಾರ್ಯ ನಡೆಸಲಾಗುತ್ತಿದೆ.
- ಹಸುವೊಂದು ಕಲ್ಲಿಗೆ ಹಾಲು ನೀಡುವ ವಿಚಿತ್ರ ಘಟನೆ: ಹೊಸನಗರ ತಾಲೂಕು ಕೆಂಚನಾಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಸುವೊಂದು ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸಿತ್ತು. ಮನೆಯಿಂದ ಮೇಯಲು ಹೊರಟ ಹಸು ಸೀದಾ ತಮ್ಮೂರಿನ ಬಯಲಿನ ಪ್ರದೇಶಕ್ಕೆ ಹೋಗಿ ಅಲ್ಲಿನ ಕಲ್ಲು ಬಂಡೆಯ ಮೇಲೆ ಹಾಲು ಸುರಿಸಲು ಪ್ರಾರಂಭಿಸಿತ್ತು. ಈ ಭಾಗದಲ್ಲಿ ಪುರಾತನ ದೇವಾಲಯ ಇತ್ತು ಎಂದು ಗ್ರಾಮಸ್ಥರು ತಿಳಿಸಿದ್ದರು. ಇದು ಏಪ್ರಿಲ್ 24ರಂದು ನಡೆದ ಘಟನೆಯಾಗಿದೆ.
- ಶಿಕಾರಿಪುರ ಪಟ್ಟಣ ಬಂದ್:ಜುಲೈ27ರಂದು ಬಿ.ಎಸ್.ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಸ್ವಕ್ಷೇತ್ರ ಶಿಕಾರಿಪುರ ಬಂದ್ ಮಾಡಲಾಗಿತ್ತು. ಬೆಂಗಳೂರಿನಲ್ಲಿ ಯಡಿಯೂರಪ್ಪ ರಾಜೀನಾಮೆ ನೀಡುತ್ತಲೇ, ಶಿಕಾರಿಪುರದಲ್ಲಿ ಅಭಿಮಾನಿಗಳು ಮೆರವಣಿಗೆ ನಡೆಸಿ, ಬಿಜೆಪಿ ವರಿಷ್ಟರ ವಿರುದ್ದ ಆಕ್ರೋಶ ವ್ಯಕ್ತಪಡಿಸಿ, ಪಟ್ಟಣ ಬಂದ್ ಮಾಡಿಸಿದ್ದರು. ಇದರಿಂದ ಎಲ್ಲಾ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಿದ್ದವು.
- ನೆಟ್ವರ್ಕ್ಗಾಗಿ ಪಾದಯಾತ್ರೆ:ಶರಾವತಿ ನದಿಗೆ ಲಿಂಗನಮಕ್ಕಿ ಎಂಬಲ್ಲಿ ಜಲಾಶಯ ನಿರ್ಮಾಣ ಮಾಡಿದ ಮೇಲೆ ನೂರಾರು ಗ್ರಾಮಗಳು ಮುಳುಗಡೆಯಾದವು. ಕೆಲ ಗ್ರಾಮಗಳನ್ನು ಸ್ಥಳಾಂತರ ಮಾಡಲಾಗಿತ್ತು. ಉಳಿದ ಗ್ರಾಮಗಳ ಜನರು ನಗರ ಪ್ರದೇಶಗಳಿಗೆ ಸಂಪರ್ಕವಿಲ್ಲದೆ, ದ್ವೀಪದಲ್ಲಿ ವಾಸ ಮಾಡುತ್ತಿದ್ದಾರೆ. ಇಲ್ಲಿ ಬಿಎಸ್ಎನ್ಎಲ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಇಲ್ಲಿನ ಸುಮಾರು 15 ಗ್ರಾಮದ ಯುವಕರು ಸೇರಿ ಗಾಂಧಿ ಜಯಂತಿ ಅಂಗವಾಗಿ ಪಾದಯಾತ್ರೆ ನಡೆಸಿ, ನೆಟ್ವರ್ಕ್ಗಾಗಿ ಆಗ್ರಹಿಸಿದ್ದರು.
- ಕೃಷಿ ಅಧಿಕಾರಿ ಮನೆ ಮೇಲೆ ದಾಳಿ:ನವೆಂಬರ್ 24ರಂದು ಕೃಷಿ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ ನಡೆಸಿ 6 ಕೆ.ಜಿ ಬಂಗಾರದ ಬಿಸ್ಕೇಟ್ ವಶಕ್ಕೆ ಪಡೆದಿತ್ತು. ಶಿವಮೊಗ್ಗ ಮೂಲದ ರುದ್ರೇಶಪ್ಪನವರು ಗದಗ ಜಿಲ್ಲೆಯ ಕೃಷಿ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಗದಗ್ನ ಕಚೇರಿ, ಮನೆ ಹಾಗೂ ಶಿವಮೊಗ್ಗದ ಮನೆಯ ಮೇಲೂ ದಾಳಿಯಾಗಿತ್ತು. ಈ ವೇಳೆ ಮನೆಯಲ್ಲಿ ಚಿನ್ನದ ಬಿಸ್ಕೆಟ್ಗಳು ಹಾಗೂ 15 ಲಕ್ಷ ಹಣ ಪತ್ತೆಯಾಗಿತ್ತು.
- ಅರಣ್ಯ ಇಲಾಖೆಯ ಕಪ್ಪೆ ಹಬ್ಬ:ಡಿಸೆಂಬರ್18ರಂದು ವನ್ಯಜೀವಿಗಳ ಉಳಿವಿಕೆಗಾಗಿ ಅರಣ್ಯ ಇಲಾಖೆಯು ಪ್ರಾಣಿಗಳ ಹೆಸರಿನಲ್ಲಿ ಹಬ್ಬ ಆಚರಣೆ ಮಾಡಿ ಎಲ್ಲರಲ್ಲೂ ಜಾಗೃತಿ ಮೂಡಿಸುತ್ತಿದೆ. ಅದೇ ರೀತಿ ಕಪ್ಪೆಗಳ ಬಗ್ಗೆ ಅರಿವು, ಜಾಗೃತಿ ಹಾಗೂ ಅವುಗಳ ಸಂರಕ್ಷಣೆಗಾಗಿ ಕಪ್ಪೆ ಹಬ್ಬವನ್ನು ಜಿಲ್ಲೆಯಲ್ಲಿ ಆಚರಿಸಲಾಯಿತು. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಶರಾವತಿ ಹಿನ್ನೀರಿನ ಸುಂದರ ಪ್ರದೇಶವಾದ ಮುಪ್ಪಾನೆಯಲ್ಲಿ ಕಪ್ಪೆ ಹಬ್ಬವನ್ನು ಆಚರಿಸಲಾಯಿತು. ಇದರಲ್ಲಿ ವಿದ್ಯಾರ್ಥಿಗಳು, ಪರಿಸರ ಆಸಕ್ತರು ಸೇರಿದಂತೆ ನೂರಾರು ಮಂದಿ ಭಾಗಿಯಾಗಿದ್ದರು.
- ವೈದ್ಯಕೀಯ ಮಹಾವಿದ್ಯಾಲಯದ ಮೇಲೆ ಅರಣ್ಯ ಇಲಾಖೆ ದಾಳಿ:ಡಿಸೆಂಬರ್ 23ರಂದು ರಾಜ್ಯದಲ್ಲಿಯೇ ಪ್ರಥಮವಾಗಿ ಅರಣ್ಯ ಇಲಾಖೆಯಿಂದ ಪಶು ವೈದ್ಯಕೀಯ ಕಾಲೇಜಿನ ಮೇಲೆ ದಾಳಿ ನಡೆಸಲಾಗಿತ್ತು. ಅಕ್ರಮವಾಗಿ ಶೆಡ್ಯೂಲ್ಡ್ 1ರ ಪಟ್ಟಿಯಲ್ಲಿ ಬರುವ ಪ್ರಾಣಿಗಳ ಅಂಗಾಂಗಗಳನ್ನು ಸಂಗ್ರಹ ಮಾಡಿಕೊಂಡಿದ್ದಾರೆ ಎಂಬ ದೂರಿನ ಮೇಲೆ ದಾಳಿ ನಡೆಸಲಾಗಿತ್ತು. ಈ ದಾಳಿಯ ವೇಳೆ ಅನೇಕ ಪ್ರಾಣಿಗಳ ಅಂಗಾಂಗಗಳು ಪತ್ತೆಯಾಗಿದ್ದವು.