ಶಿವಮೊಗ್ಗ: ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ರಾಜ್ಯ ಅಪರ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ, ಜಿಲ್ಲಾ ನೋಡಲ್ ಕಾರ್ಯದರ್ಶಿ ಮಣಿವಣ್ಣನ್ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಮಳೆಯಿಂದ ಬೆಚ್ಚಿಬಿದ್ದ ಹೆಗಲತ್ತಿ ಗ್ರಾಮ: ಅಧಿಕಾರಿಗಳ ತಂಡ ಭೇಟಿ - ಹೆಗಲತ್ತಿ ಗ್ರಾಮ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೆಗಲಗತ್ತಿ ಗ್ರಾಮದಲ್ಲಿ ಕಳೆದ ವಾರ ಬಂದ ಭಾರಿ ಮಳೆಯಿಂದ ಹೆಗಲತ್ತಿಯ ಗುಡ್ಡ ಕುಸಿದು ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನೆಲಸಮವಾಗಿದ್ದವು. ಇದೀಗ ಗ್ರಾಮಕ್ಕೆ ಅಧಿಕಾರಿಗಳ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಸರ್ಕಾರಕ್ಕೆ ವರದಿ ನೀಡಲಿದ್ದಾರೆ.
![ಮಳೆಯಿಂದ ಬೆಚ್ಚಿಬಿದ್ದ ಹೆಗಲತ್ತಿ ಗ್ರಾಮ: ಅಧಿಕಾರಿಗಳ ತಂಡ ಭೇಟಿ](https://etvbharatimages.akamaized.net/etvbharat/prod-images/768-512-4158435-thumbnail-3x2-megha.jpg)
ತೀರ್ಥಹಳ್ಳಿ ತಾಲೂಕಿನ ಹೆಗಲಗತ್ತಿ ಗ್ರಾಮದಲ್ಲಿ ಕಳೆದ ವಾರ ಬಂದ ಭಾರಿ ಮಳೆಯಿಂದ ಹೆಗಲತ್ತಿಯ ಗುಡ್ಡ ಕುಸಿದು ಗುಡ್ಡದ ಕೆಳ ಭಾಗದ ಅಡಿಕೆ, ಬಾಳೆ ತೋಟಗಳು ನೆಲಸಮವಾಗಿದ್ದವು. ಇದರಿಂದ ಅಪಾರ ಪ್ರಮಾಣದ ಆಸ್ತಿ ಹಾನಿಯಾಗಿತ್ತು. ಅಲ್ಲದೆ, ಕುಂಟೆ ಹೊಳೆ ತುಂಬಿ ಹರಿದ ಪರಿಣಾಮ ಕುಂಟೆ ಹೊಳೆಯ ಸೇತುವೆ, ಅಕ್ಕ ಪಕ್ಕದ ಮನೆಗಳು, ಜಾನುವಾರುಗಳು ಕೊಚ್ಚಿ ಹೋಗಿದ್ದವು. ಈ ಹಿಂದೆ ಎಂದೂ ಕೇಳರಿಯದ ರೀತಿಯಲ್ಲಿ ನಡೆದ ಘಟನೆಯಿಂದ ಮಲೆನಾಡು ಬೆಚ್ಚಿ ಬಿದ್ದಿತ್ತು.
ಕಳೆದ ಮಂಗಳವಾರ ಸಿಎಂ ಯಡಿಯೂರಪ್ಪ ಹೆಲಗತ್ತಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈಗ ಸ್ಥಳ ಪರಿಶೀಲನೆ ಮಾಡಲು ಅಧಿಕಾರಿಗಳನ್ನು ಸಿಎಂ ಕಳುಹಿಸಿ ಕೊಟ್ಟಿದ್ದಾರೆ. ಈ ಅಧಿಕಾರಿಗಳ ತಂಡ ನಷ್ಟದ ಅಂದಾಜಿನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಈ ವೇಳೆ ಜಿಲ್ಲಾಧಿಕಾರಿ ಶಿವಕುಮಾರ್, ಕೆ.ಬಿ. ತೀರ್ಥಹಳ್ಳಿ, ತಹಶೀಲ್ದಾರ್ ಭಾಗ್ಯ ಸೇರಿದಂತೆ ಇತರ ಅಧಿಕಾರಿಗಳು ಹಾಜರಿದ್ದರು. ಅಧಿಕಾರಿಗಳು ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದ್ದು, ಸರ್ಕಾರಕ್ಕೆ ವರದಿ ನೀಡಲಿದ್ದಾರೆ.