ಶಿವಮೊಗ್ಗ:ಇಲ್ಲಿನ ಬಿ.ಹೆಚ್.ರಸ್ತೆಯ ದುಮ್ಮಳ್ಳಿ ತಿರುವಿನಲ್ಲಿ ಕಳೆದ 25 ವರ್ಷಗಳಿಂದ ಎಳನೀರು ವ್ಯಾಪಾರ ಮಾಡಿ ಶಾಹೀದಾ ಬಾನು ಎಂಬುವರು ಜೀವನ ನಡೆಸುತ್ತಿದ್ದಾರೆ. ಶಾಹೀದಾ ಬಾನು ಅವರ ಪತಿ ಒಮ್ಮೆಲೇ ತೀರಿಹೋದಾಗ ಕುಟುಂಬಕ್ಕೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಯಿತು. ಆಗ ಸಂಸಾರ ನಿರ್ವಹಣೆಗೆ ಅನಿವಾರ್ಯವಾಗಿ ಈ ಕಾಯಕಕ್ಕಿಳಿದರು. ಅಂದು ಮಚ್ಚು ಹಿಡಿದು ಎಳನೀರು ವ್ಯಾಪಾರ ಪ್ರಾರಂಭಿಸಿದ ಶಾಹೀದಾ ಬಾನು ಇಂದಿಗೂ ಅದನ್ನು ಮುಂದುವರೆಸಿಕೊಂಡ ಹೋಗುತ್ತಿದ್ದಾರೆ.
ಶಾಹೀದಾ ಬಾನು ಅವರದು ಸುಂದರ ಸಂಸಾರವಾಗಿತ್ತು. ಪತಿ ಇಬ್ಬರು ಮಕ್ಕಳನ್ನು ಹೊಂದಿದ್ದ ಅವರು ಸುಖವಾಗಿಯೇ ಇದ್ದರು. ಆದರೆ ಅವರ ಪತಿ ಸಾವನ್ನಪ್ಪಿದ್ದು, ಮುಂದೆ ದಾರಿ ಕಾಣದಂತೆ ಆಗಿತ್ತು. ಶಾಹೀದಾ ಬಾನು ಅವರ ಪತಿ ಎಳನೀರು ವ್ಯಾಪಾರ ಮಾಡುತ್ತಿದ್ದರು. ಈ ವೇಳೆ ಪತಿ ಎಳನೀರನ್ನು ಕೊಚ್ಚುವುದನ್ನು ನೋಡಿದ್ದ ಶಾಹೀದಾ ಅವರು ಸಹ ಅದರಲ್ಲೇ ಜೀವನ ನಡೆಸಲು ಎಳನೀರು ವ್ಯಾಪಾರವನ್ನೇ ಆಯ್ಕೆ ಮಾಡಿಕೊಂಡರು.
ಶಾಹೀದಾ ಬಾನು ಅವರು ಹೋಲ್ಸೇಲ್ ಎಳನೀರು ಮಾರಾಟ ಮಾಡುವವರ ಬಳಿ ಎಳನೀರು ಖರೀದಿಸಿ ಮಾರಾಟ ಮಾಡುತ್ತಿದ್ದಾರೆ. ಗಂಡನ ಕಸುಬನ್ನೇ ವೃತ್ತಿಯನ್ನಾಗಿಸಿಕೊಂಡು ಮಕ್ಕಳನ್ನು ಸಾಕಲು ಪ್ರಾರಂಭಿಸಿದರು. ಇದಕ್ಕೆ ಶಾಹೀದಾ ಬಾನು ತವರು ಮನೆಯವರು ಸಹ ಸಾಥ್ ನೀಡಿದರು. ಇವರ ಗಂಡು ಮಗನನ್ನು ತವರು ಮನೆಯಲ್ಲಿ ಓದಲು ಕಳುಹಿಸಿದರು. ಮಗಳನ್ನು ತನ್ನ ಅಕ್ಕನ ಮನೆಯಲ್ಲಿ ಓದಿಸಿದರು.