ಕರ್ನಾಟಕ

karnataka

ETV Bharat / city

ಅಧಿಕೃತ ಮರಳು ಬ್ಲಾಕ್‍ಗಳಲ್ಲಿ ಮರಳುಗಾರಿಕೆ ಆರಂಭಿಸುವಂತೆ ಜಿಲ್ಲಾಧಿಕಾರಿ ಸೂಚನೆ - ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ನ್ಯೂಸ್​

ಶಿವಮೊಗ್ಗ ಜಿಲ್ಲೆಯಲ್ಲಿ ಗುರುತಿಸಿರುವ 28 ಮರಳು ಬ್ಲಾಕ್‍ಗಳಲ್ಲಿ ಮರಳುಗಾರಿಕೆ ಆರಂಭಿಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮರಳು ಸಮಿತಿ ಸಭೆ
ಮರಳು ಸಮಿತಿ ಸಭೆ

By

Published : Feb 10, 2020, 5:07 PM IST

ಶಿವಮೊಗ್ಗ: ಜಿಲ್ಲೆಯಲ್ಲಿ ಗುರುತಿಸಿರುವ 28 ಮರಳು ಬ್ಲಾಕ್‍ಗಳಲ್ಲಿ ಮರಳುಗಾರಿಕೆ ಆರಂಭಿಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮರಳು ಸಮಿತಿ ಸಭೆ ನಡೆಸಿ ಮಾತನಾಡಿದ ಅವರು, ನದಿಯಲ್ಲಿ ಕೆಲವು ಕಡೆಗಳಲ್ಲಿ ಇನ್ನೂ ನೀರು ಇಳಿಯದಿರುವ ಕಾರಣ ಮರಳುಗಾರಿಕೆ ಪ್ರಾರಂಭವಾಗಿಲ್ಲ. ಜಿಲ್ಲೆಯಲ್ಲಿ ಒಟ್ಟು 28 ಬ್ಲಾಕ್‍ಗಳ ಪೈಕಿ 8 ಕಡೆ ಮರಳುಗಾರಿಕೆ ಪ್ರಾರಂಭಿಸಲಾಗಿದೆ. ತೀರ್ಥಹಳ್ಳಿಯಲ್ಲಿ ಇರುವ 13 ಮರಳು ಬ್ಲಾಕ್‍ಗಳ ಪೈಕಿ ಎರಡು ಬ್ಲಾಕ್‍ಗಳಲ್ಲಿ ಮರಳುಗಾರಿಕೆ ಪ್ರಾರಂಭವಾಗಿದೆ. ಇನ್ನುಳಿದ ಬ್ಲಾಕ್‍ಗಳಲ್ಲಿ ಮರಳುಗಾರಿಕೆಯನ್ನು ಒಂದು ವಾರದ ಒಳಗಾಗಿ ಪ್ರಾರಂಭಿಸಲು ಕ್ರಮ ಕೈಗೊಳ್ಳುವಂತೆ ಅವರು ತಿಳಿಸಿದರು.

ಅಕ್ರಮ ಮರಳುಗಾರಿಕೆ ಕುರಿತು ದೂರುಗಳು ಬರುತ್ತಿದ್ದು, ಅದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಪೊಲೀಸ್, ಕಂದಾಯ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಜಂಟಿಯಾಗಿ ಕಾರ್ಯ ನಿರ್ವಹಿಸಬೇಕು. ಕೋಟೆ ಗಂಗೂರಿನಲ್ಲಿ ಅಕ್ರಮ ಗಣಿಗಾರಿಕೆ ಮೇಲೆ ನಿಗಾ ಇರಿಸಲು ಮೂರು ಇಲಾಖೆಗಳು ಜಂಟಿಯಾಗಿ ಚೆಕ್‍ಪೋಸ್ಟ್ ಆರಂಭಿಸಬೇಕು. ಜಿಲ್ಲೆಯಲ್ಲಿರುವ ಎಲ್ಲಾ ಚೆಕ್‍ಪೋಸ್ಟ್​ಗಳಲ್ಲಿ ಅಗತ್ಯ ಹೋಂ ಗಾರ್ಡ್ ಸಿಬ್ಬಂದಿ ನಿಯೋಜಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ಕಲ್ಲು ಗಣಿಗಾರಿಕೆ ಮೇಲೆ ನಿಗಾ:

ಅನಧಿಕೃತ ಕಲ್ಲು ಗಣಿಗಾರಿಕೆ ಮೇಲೆ ನಿಗಾ ಇರಿಸಿ, ಯಾವುದೇ ಕಾರಣಕ್ಕೂ ಗಣಿಗಾರಿಕೆಗೆ ಅವಕಾಶ ನೀಡಬಾರದು. ಕ್ವಾರಿಗೆ ಅನುಮತಿ ನೀಡುವ ಸಂದರ್ಭದಲ್ಲಿ ಎಲ್ಲಾ ಮಾರ್ಗಸೂಚಿಯನ್ನು ಅನುಸರಿಸಬೇಕು. ರಾಷ್ಟ್ರೀಯ ಹೆದ್ದಾರಿಯಿಂದ 200 ಮೀಟರ್ ಒಳಗೆ, 50ಕ್ಕೂ ಹೆಚ್ಚಿನ ಜನವಸತಿ ಇರುವ ಪ್ರದೇಶ ಸೇರಿದಂತೆ ಹಲವು ನಿಬಂಧನೆಗಳನ್ನು ವಿಧಿಸಲಾಗಿದ್ದು, ಯಾವುದೇ ಕಾರಣಕ್ಕೂ ಮಾರ್ಗಸೂಚಿ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.

ಅಕ್ರಮ ಕಲ್ಲು ಕ್ವಾರಿ ಮೇಲೆ ದಾಳಿ:

ಅಕ್ರಮವಾಗಿ ಕಲ್ಲು ಕ್ವಾರಿ ನಡೆಸುತ್ತಿದ್ದ ಘಟಕಗಳ ಮೇಲೆ ದಾಳಿ ನಡೆಸಿ ಯಂತ್ರೋಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೋಟೆಗಂಗೂರಿನಲ್ಲಿ ಅರಣ್ಯ ಪ್ರದೇಶದಲ್ಲಿ ಕ್ವಾರಿ ನಡೆಸುತ್ತಿದ್ದ ಸ್ಥಳದಲ್ಲಿ 17 ವಾಹನ, ದೇವಾತಿಕೊಪ್ಪ ಅರಣ್ಯ ಪ್ರದೇಶದ ಕ್ವಾರಿ ಪ್ರದೇಶದಲ್ಲಿ ಒಂದು ಕಂಪ್ರೆಸರ್ ಮತ್ತು ಸ್ಪೋಟಕ ಸಾಮಾಗ್ರಿಗಳು, ಗೆಜ್ಜೆನಹಳ್ಳಿಯ ಎರಡು ಪ್ರತ್ಯೇಕ ಸರ್ವೆ ನಂಬರ್​ನಲ್ಲಿ ಎರಡು ಕಂಪ್ರೆಸರ್ ಹಾಗೂ ಕ್ವಾರಿಗೆ ಸಂಬಂಧಿಸಿದ ಯಂತ್ರೋಪಕರಣ ವಶಪಡಿಸಿಕೊಳ್ಳಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಭೂವಿಜ್ಞಾನಿ ರಶ್ಮಿ ಅವರು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ABOUT THE AUTHOR

...view details