ಶಿವಮೊಗ್ಗ :ಐಪಿಎಲ್ ಪ್ರಾರಂಭವಾದಾಗಿನಿಂದಲೂ ಆರ್‌ಸಿಬಿ ತಂಡ ಒಂದು ಸಾರಿಯೂ ಕಪ್ ಗೆಲ್ಲದೆ ಹೋದರೂ ಸಹ ತಂಡದ ಮೇಲಿನ ಅಭಿಮಾನವನ್ನು ಕನ್ನಡಿಗರು ಕಡಿಮೆ ಮಾಡಿಲ್ಲ. ಸಾಗರ ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿ ಸದ್ಗುರು ಹೋಟೆಲ್ ನಡೆಸುತ್ತಿರುವ ಸಂತೋಷ್ ಸದ್ಗುರು ತಮ್ಮ ಫಿಯಟ್ ಕಾರಿನ ತುಂಬೆಲ್ಲಾ ಈ ಸಲ ಕಪ್ ನಮ್ದೆ ಅಂತಾ ಸ್ಟಿಕ್ಕರ್ ಮೂಲಕ ಬರೆಯಿಸಿ ಕಾರನ್ನೆ ಹೊಸ ವಿನ್ಯಾಸದಲ್ಲಿ ಬದಲಾಯಿಸಿದ್ದಾರೆ. ಈ ಮೂಲಕ ತಮ್ಮ ಕ್ರಿಕೆಟ್ ಅಭಿಮಾನವನ್ನು ಹೊರ ಹಾಕಿದ್ದಾರೆ.
ಕಾರಿನ ಮೇಲೆ ಕಪ್ ಮಾತ್ರ ಬರೆಸದೆ, ಕನ್ನಡ ಮೇರು ನಟರ ಭಾವಚಿತ್ರವನ್ನು ಸಹ ಬರೆಯಿಸಿದ್ದಾರೆ. ಇದರಲ್ಲಿ ಕನ್ನಡದ ವರ ನಟ ಡಾ.ರಾಜಣ್ಣ, ಶಂಕರ ನಾಗ್ ಹಾಗೂ ಪುನೀತ್ ರಾಜ್ ಕುಮಾರ್ ಚಿತ್ರಗಳನ್ನು ಹಾಕಿ ಕನ್ನಡಾಭಿಮಾನಿವನ್ನು ಮೆರೆದಿದ್ದಾರೆ. ಈ ಕಾರನ್ನು ಇಂದು ಸಾಗರದಲ್ಲಿ ಖ್ಯಾತ ಕಿರುತರೆ ನಟಿ ರಜನಿ ರಾಘವನ್ ಬಿಡುಗಡೆಗೊಳಿಸಿದರು.