ಶಿವಮೊಗ್ಗ: ಮಲೆನಾಡಿನಲ್ಲಿ ಕಳೆದೊಂದು ವಾರದಿಂದ ಮಳೆ ಕ್ಷೀಣಿಸಿದೆ. ವಾಡಿಕೆಯಂತೆ ಈ ವೇಳೆಗಾಗಲೇ ಭಾಗಶಃ ಭರ್ತಿಯಾಗುತ್ತಿದ್ದ ಜಲಾಶಯಗಳು ಈ ಬಾರಿ ಇನ್ನೂ ಭರ್ತಿಯಾಗಿಲ್ಲ. ಇದರಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆ ಉಂಟಾಗಿದೆ.
ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಈ ಬಾರಿ ನೀರಿಕ್ಷೆಯಂತೆ ಮಳೆಯಾಗಿಲ್ಲ. ಕಳೆದ ವರ್ಷ ಈ ವೇಳೆಗಾಗಲೇ ಮುಂಗಾರು ಅಬ್ಬರಿಸಿ ಸುರಿಯುತ್ತಿದ್ದರಿಂದ ಶಿವಮೊಗ್ಗದ ಪ್ರಮುಖ ಜಲಾಶಯಗಳಾದ ಲಿಂಗನಮಕ್ಕಿ, ಭದ್ರಾ, ತುಂಗಾ, ಮಾಣಿ ಭಾಗಶಃ ಭರ್ತಿಯಾಗಿದ್ದವು. ಆದರೆ ಈ ಬಾರಿ ತುಂಗಾ ಜಲಾಶಯ ಹೊರತುಪಡಿಸಿ ಮತ್ಯಾವ ಜಲಾಶಯಗಳು ಕೂಡ ಭರ್ತಿಯಾಗಿಲ್ಲ. ಜುಲೈ ತಿಂಗಳಲ್ಲಿ ಶೇ. 37ರಷ್ಟು ಮಳೆ ಕೊರತೆ ಎದುರಾಗಿದೆ.
ಕಳೆದೊಂದು ವಾರದಿಂದ ಜಿಲ್ಲೆಯಾದ್ಯಂತ ವರುಣ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದು, ಇದೇ ರೀತಿ ಮುಂದುವರೆದರೆ ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ಗಣನೀಯ ಇಳಿಕೆಯಾಗುವ ಆತಂಕ ಎದುರಾಗಿದೆ. ಜೂನ್ 1ರಿಂದ ಇದುವರೆಗೆ ಜಿಲ್ಲೆಯಲ್ಲಿ ವಾಡಿಕೆ ಮಳೆ 1071 ಮಿ.ಮೀ. ಆಗಬೇಕಿತ್ತು. ಆದರೆ ಕೇವಲ 675 ಮಿ.ಮೀ ಮಳೆ ಬಿದ್ದಿದೆ. ಇನ್ನು ಶಿವಮೊಗ್ಗದಲ್ಲಿ ಶೇ. 30, ಭದ್ರಾವತಿಯಲ್ಲಿ ಶೇ. 34, ತೀರ್ಥಹಳ್ಳಿಯಲ್ಲಿ ಶೇ. 49, ಸಾಗರದಲ್ಲಿ ಶೇ. 13, ಹೊಸನಗರದಲ್ಲಿ ಶೇ. 27, ಶಿಕಾರಿಪುರದಲ್ಲಿ ಶೇ. 31 ಹಾಗೂ ಸೊರಬದಲ್ಲಿ ಶೇ. 47ರಷ್ಟು ಮಳೆ ಕೊರತೆ ಎದುರಾಗಿದೆ.