ಶಿವಮೊಗ್ಗ:ಸದ್ಯದಲ್ಲೇ ಆರಂಭವಾಗಲಿರುವ ಮುಂಗಾರಿನಲ್ಲಿ ಮಳೆಯ ಹಾನಿ ತಪ್ಪಿಸಲು ಮುಂಜಾಗ್ರತಾ ಕ್ರಮಗಳನ್ನು ಈಗಲೇ ಕೈಗೊಳ್ಳುವಂತೆ ಸೂಚನೆ ನೀಡಿದರು. ಕೆರೆಗಳ ಏರಿ ದುರ್ಬಲವಾಗಿರುವುದನ್ನು ಗುರುತಿಸಿ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ಮರದ ಕೊಂಬೆಗಳು ವಿದ್ಯುತ್ ಕಂಬಗಳ ಮೇಲೆ ಬೀಳದಂತೆ ಅವುಗಳನ್ನು ತೆರವುಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇತ್ತೀಚಿನ ಮಳೆಯಿಂದ ಉಂಟಾಗಿರುವ ಹಾನಿ ಕುರಿತು ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಹಾನಿಗೀಡಾಗಿರುವ ಸಂಪರ್ಕ ರಸ್ತೆಗಳ ದುರಸ್ತಿ, ಕೆರೆ ದುರಸ್ತಿ ಕಾರ್ಯಗಳನ್ನು ಕೈಗೊಂಡು ಮತ್ತೆ ಕೆರೆಗಳು ಒಡೆಯದಂತೆ ಎಚ್ಚರಿಕೆ ವಹಿಸಬೇಕು. ಶಿವಮೊಗ್ಗ ನಗರದಲ್ಲಿ ರಾಜಕಾಲುವೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಹೂಳೆತ್ತುವ ಕಾರ್ಯವನ್ನು ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಳೆ ಹಾನಿ ವಿವರ: ಕಳೆದ ವಾರ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಬೆಳೆಗಳು ಹಾಗೂ ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿ ಉಂಟಾಗಿದೆ. 24ರಸ್ತೆ, 20 ಸೇತುವೆ ಮತ್ತು ಮೋರಿಗಳು, 427 ವಿದ್ಯುತ್ ಕಂಬಗಳು, 54 ವಿದ್ಯುತ್ ಪರಿವರ್ತಕಗಳು, 24 ಶಾಲಾ ಕಟ್ಟಡ, 17 ಅಂಗನವಾಡಿ ಕಟ್ಟಡಗಳು, 43 ಕೆರೆಗಳಿಗೆ ಹಾನಿ ಉಂಟಾಗಿದೆ. 2,139 ಮನೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ. 5ಮನೆಗಳಿಗೆ ತೀವ್ರ ಹಾನಿ ಉಂಟಾಗಿದ್ದು, 257 ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ.