ಶಿವಮೊಗ್ಗ:ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಕೋವಿಡ್ ವ್ಯಾಕ್ಸಿನ್ ನೀಡುವ ವಿಚಾರಕ್ಕೆ ನಡೆದ ಗಲಾಟೆ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಈ ಗಲಾಟೆಯಿಂದಾಗಿ ಬಿಜೆಪಿ ಕಾರ್ಯಕರ್ತರಾದ ವಿಶ್ವನಾಥನ್, ಆನಂದ್ ಗಾಣಿಗ, ಯಶಸ್ವಿ ಕಡ್ತುರ್, ಸುಮಂತ್ ಹಾಗೂ ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಕಾಂಗ್ರೆಸ್ ಸದಸ್ಯ ನಮೃತ್, ಸುಭಾಷ್ ಕುಲಾಲ್ ಆಸ್ಪತ್ರೆ ಸೇರಿದ್ದಾರೆ.
ಏನಿದು ಘಟನೆ?
ತೀರ್ಥಹಳ್ಳಿಯ ಸೀಬಿನಕೆರೆ ಶಾಲೆಯಲ್ಲಿ ಕೋವಿಡ್ ವ್ಯಾಕ್ಸಿನ್ ಹಾಕಲಾಗುತ್ತಿತ್ತು. ಈ ವೇಳೆ ಲಸಿಕೆ ಹಾಕುವ ಸಂಬಂಧ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದಿದೆ. ನಂತರ ಇದು ಘರ್ಷಣೆಗೆ ತಿರುಗಿದ್ದು, ಬಿಜೆಪಿಯ ವಿಶ್ವನಾಥ್ ಗಾಣಿಗ ಮತ್ತು ಕಾಂಗ್ರೆಸ್ನ ನಮೃತ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ಬಳಿಕ ತೀರ್ಥಹಳ್ಳಿಯ ಮುಖ್ಯ ಬಸ್ ನಿಲ್ದಾಣದ ಬಳಿಯ ಹೋಟೆಲ್ ಒಂದರಲ್ಲಿ ಚಹಾ ಕುಡಿಯುತ್ತಿದ್ದಾಗ ಮತ್ತೆ ಗಲಾಟೆ ನಡೆದು ಕಾಂಗ್ರೆಸ್ ಕಾರ್ಯಕರ್ತ ಸುಭಾಷ್ ಕುಲಾಲ್, ಬಿಜೆಪಿ ಕಾರ್ಯಕರ್ತರಾದ ಯಶಸ್ವಿ ಕಡ್ತುರ್ ಗಾಯಗೊಂಡಿದ್ದಾರೆ. ಬಳಿಕ ಎರಡೂ ಪಕ್ಷದ ನಾಯಕರು ಆಸ್ಪತ್ರೆ ಮುಂದೆ ಜಮಾವಣೆಯಾಗಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಶಾಸಕ ಆರಗ ಜ್ಞಾನೇಂದ್ರ ಸ್ಥಳಕ್ಕಾಗಮಿಸಿ ಬಿಜೆಪಿ ಕಾರ್ಯಕರ್ತರ ಆರೋಗ್ಯ ವಿಚಾರಿಸಿದರು.