ಶಿವಮೊಗ್ಗ: ಇಂದು ಶಿವಮೊಗ್ಗದಲ್ಲಿ ಒಂದು ಕಿಲೋಮೀಟರ್ ರಸ್ತೆಗೆ ಪುನೀತ್ ರಾಜ್‍ಕುಮಾರ್ ಹೆಸರು ನಾಮಕರಣ ಮಾಡಿ ಅವರಿಗೆ ಗೌರವ ಸಲ್ಲಿಸಲಾಯಿತು.
ದೊಡ್ಮನೆ ಹುಡ್ಗ, ಕರುನಾಡಿನ ಯುವಕರ ಕಣ್ಮಣಿ ಪುನೀತ್ ರಾಜ್‍ಕುಮಾರ್ ನಮ್ಮನ್ನೆಲ್ಲಾ ಬಿಟ್ಟು ಹೋಗಿದ್ದರೂ ಕೂಡ ಕೋಟ್ಯಂತರ ಅಭಿಮಾನಿಗಳ ಮನಸ್ಸಿನಲ್ಲಿ ನೆಲೆಸಿದ್ದಾರೆ.
ಹೀಗಾಗಿ, ಶಿವಮೊಗ್ಗ ನಗರದ ಒಂದು ಕಿಲೋ ಮೀಟರ್ ಚಾನಲ್ ಏರಿ ರಸ್ತೆಯನ್ನು ಪುನೀತ್ ರಾಜ್‍ಕುಮಾರ್ ರಸ್ತೆ ಎಂದು ಸ್ಥಳೀಯರು ನಾಮಕರಣ ಮಾಡಿ, ಅಪ್ಪುನನ್ನು ಸ್ಮರಿಸಿದ್ದಾರೆ.
ಶಿವಮೊಗ್ಗದಲ್ಲಿ ರಸ್ತೆಗೆ ಪುನೀತ್ ರಾಜ್‍ಕುಮಾರ್ ಹೆಸರು ನಾಮಕರಣ ಮಾಡಲಾಗಿದೆ ಶರಾವತಿ ನಗರ, ಹೊಸಮನೆ ಬಡಾವಣೆ ಸೇರಿದಂತೆ ಸ್ಥಳೀಯರು ಪುನೀತ್ ರಾಜ್‍ಕುಮಾರ್ ಅವರ ಹೆಸರನ್ನು ನಾಮಕರಣ ಮಾಡಿ, ಬೋರ್ಡ್ ನೆಟ್ಟಿದ್ದಾರೆ. ಅಷ್ಟೇ ಅಲ್ಲ, ಮಹಾನಗರ ಪಾಲಿಕೆ ವತಿಯಿಂದ ಪುನೀತ್ ರಾಜ್‍ಕುಮಾರ್ ರಸ್ತೆಯೆಂದು ಅಧಿಕೃತವಾಗಿ ಘೋಷಿಸುವಂತೆ ಮನವಿ ಮಾಡಿದ್ದಾರೆ.
ಇದಕ್ಕೆ ಸ್ಪಂದಿಸಿರುವ ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ, ಈ ಕುರಿತು ಮಹಾನಗರ ಪಾಲಿಕೆ ಸಭೆಯಲ್ಲಿ ಚರ್ಚಿಸಿ, ಅಧಿಕೃತವಾಗಿ ಘೋಷಣೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಅಪ್ಪು ಕೋಟ್ಯಂತರ ಅಭಿಮಾನಿಗಳನ್ನು ಬಿಟ್ಟು ಅಗಲಿರಬಹುದು. ಆದ್ರೆ, ಅವರ ನೆನಪನ್ನು ಶಾಶ್ವತವಾಗಿ ಉಳಿಸಿಕೊಳ್ಳಲು ಪುನೀತ್ ರಸ್ತೆ ಎಂದು ಹೆಸರಿಡುವ ಮೂಲಕ ಉತ್ತಮ ಕೆಲಸ ಮಾಡಿದ ಶಿವಮೊಗ್ಗದ ಜನತೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.