ಶಿವಮೊಗ್ಗ:ಭಾರಿ ಮಳೆಯಿಂದ ನೀರಿನಲ್ಲಿ ಸಿಲುಕಿಕೊಂಡಿದ್ದ ಎರಡು ಕುಟುಂಬಗಳನ್ನು ಜಿಲ್ಲೆಯ ಸಾಗರದಲ್ಲಿ ರಕ್ಷಣೆ ಮಾಡಲಾಗಿದೆ.
ವಿಪರೀತ ಮಳೆಯಿಂದ ಸಾಗರದ ವಿನೋಬನಗರಕ್ಕೆ ಮಳೆ ನೀರು ನುಗ್ಗಿದ ಪರಿಣಾಮ ಬಡಾವಣೆಯ ಮನೆಗಳ ಒಳಗೆ ನೀರು ನುಗ್ಗಿತ್ತು. ಇದರಿಂದ ಕೆಲವರು ಮನೆಯಿಂದ ಹೊರ ಬಂದು ಎತ್ತರದ ಪ್ರದೇಶಗಳಿಗೆ ಬಂದಿದ್ದರು. ಆದರೆ ಅದೇ ಬಡಾವಣೆಯ ವೃದ್ಧ ದಂಪತಿ ಮನೆಯಿಂದ ಹೊರ ಬರಲಾಗದೇ ಪರದಾಡುವಂತಾಗಿತ್ತು. ಈ ವೇಳೆ ಸ್ಥಳೀಯರು ಹಗ್ಗ ಕಟ್ಟಿ ದಂಪತಿಗಳನ್ನು ರಕ್ಷಿಸಿ ಸಂಬಂಧಿಕರ ಮನೆಗೆ ಕಳುಹಿಸಿಕೊಟ್ಟಿದ್ದಾರೆ.
ಇನ್ನು ಸಾಗರದ ಗಣಪತಿ ಕೆರೆ ಪಕ್ಕದ ಜಮೀನಿನಲ್ಲಿ ವಾಸವಿರುವ ಈಶ್ವರಪ್ಪ ಎಂಬುವವರ ಮನೆ, ಕೆರೆ ಕೋಡಿ ಬಿದ್ದು ನೀರು ನುಗ್ಗಿತ್ತು. ಇದರಿಂದ ಮನೆಯ ವಸ್ತುಗಳೆಲ್ಲ ನೀರಿನಲ್ಲಿ ತೇಲಿ ಹೋಗಿವೆ. ತಕ್ಷಣ ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಬಂದು ಮನೆಯಲ್ಲಿದ್ದ ಮೂವರು ಹಾಗೂ ಎರಡು ಹಸುಗಳನ್ನು ರಕ್ಷಿಸಿ, ಪಕ್ಕದ ನಿರ್ಮಾಣ ಹಂತದ ಸಮುದಾಯ ಭವನಕ್ಕೆ ಹಸ್ತಾಂತರಿಸಲಾಗಿದೆ.
ಮಳೆ ನೀರಿನಲ್ಲಿ ಸಿಲುಕಿಕೊಂಡಿದ್ದ ಎರಡು ಕುಟುಂಬಗಳ ರಕ್ಷಣೆ ಸಕಾಲಕ್ಕೆ ಅಗ್ನಿ ಶಾಮಕದಳ ಬಾರದೇ ಹೋಗಿದ್ದರೆ, ಜಾನುವಾರುಗಳು ನೀರಿನಲ್ಲಿ ತೇಲಿ ಹೋಗುತ್ತಿದ್ದವು ಎನ್ನಲಾಗಿದೆ. ಸ್ಥಳಕ್ಕೆ ನಗರಸಭೆ ಸದಸ್ಯ ಲಿಂಗರಾಜು ಭೇಟಿ ನೀಡಿ ಸೂಕ್ತ ಪರಿಹಾರದ ಭರವಸೆ ನೀಡಿದ್ದಾರೆ.