ಶಿವಮೊಗ್ಗ :ಆತ್ಮಹತ್ಯೆಗೆ ಶರಣಾದ ಸಂತೋಷ್ ಪಾಟೀಲ್ ಅವರ ಕುಟುಂಬಕ್ಕೆ ಸಹಾಯ ಮಾಡಲೆಂದು ಶಿವಮೊಗ್ಗ ಜಿಲ್ಲಾ ವೀರಶೈವ ಸಮಾಜದಿಂದ ಪ್ರಾಯಶ್ಷಿತ ನಿಧಿ ಸಂಗ್ರಹ ಮಾಡಲಾಗುವುದು ಎಂದು ಶಿವಮೊಗ್ಗ ವೀರಶೈವ ಸಮಾಜದ ನಿರ್ದೇಶಕ ಎಸ್.ಪಿ.ದಿನೇಶ್ ತಿಳಿಸಿದ್ದಾರೆ.
ಮೃತ ಗುತ್ತಿಗೆದಾರ ಸಂತೋಷ್ ಪಾಟೀಲ ನೆರವಿಗೆ ಮುಂದಾದ ವೀರಶೈವ ಸಮಾಜ.. ಶಿವಮೊಗ್ಗ ಪ್ರೆಸ್ ಟ್ರಸ್ಟ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂತೋಷ್ ಪಾಟೀಲ್ ಅವರು ನಮ್ಮ ವೀರಶೈವ ಸಮಾಜದವರಾಗಿದ್ದಾರೆ. ಅವರ ಆತ್ಮಹತ್ಯೆ ಖಂಡನೀಯವಾಗಿದೆ. ಸಂಕಷ್ಟದಲ್ಲಿ ಇರುವ ಅವರ ಕುಟುಂಬಕ್ಕೆ ದೇಣಿಗೆ ಸಂಗ್ರಹ ಮಾಡಿ ಹಣ ನೀಡಲಾಗುವುದು. ಇದನ್ನು ನಾವು ಪಕ್ಷಾತೀತವಾಗಿ ಮಾಡುತ್ತಿದ್ದೇವೆ.
ನೊಂದ ಜೀವಕ್ಕೆ ಪ್ರಾಯಶ್ಚಿತ ನಿಧಿಯಾಗಿ ನೀಡುವ ಕೆಲಸವನ್ನು ಶಿವಮೊಗ್ಗದ ಜನತೆ ಮಾಡಬೇಕಿದೆ. ಕಾರಣ ಸಂತೋಷ್ ಸಾವಿಗೆ ಶಿವಮೊಗ್ಗದ ವ್ಯಕ್ತಿಯೇ ಕಾರಣ ಎಂದು ಸಂತೋಷ್ ಪಾಟೀಲರೇ ಹೇಳಿರೋದನ್ನು ನಾವು ಮಾಧ್ಯಮಗಳಲ್ಲಿ ನೋಡಿದ್ದೇವೆ. ಇದರಿಂದ ನೊಂದ ಜೀವಕ್ಕೆ ಪ್ರಾಯಶ್ಷಿತ ನಿಧಿ ನೀಡಬೇಕೆಂದು ವಿನಂತಿಸಿ ಕೊಂಡರು. ಈ ಹಣವನ್ನು ಏಪ್ರಿಲ್ 23ಕ್ಕೆ ಅವರ ಕುಟುಂಬಕ್ಕೆ ತಲುಪಿಸಲಾಗುವುದು ಎಂದರು.
ವೀರಶೈವ ಸಮಾಜದಿಂದ ಸರ್ಕಾರಕ್ಕೆ ಒತ್ತಾಯ :ಸರ್ಕಾರ ಸಂತೋಷ್ ಪಾಟೀಲರಿಗೆ ನೀಡಬೇಕಾದ ಬಾಕಿ ಹಣವನ್ನು ಬಿಡುಗಡೆ ಮಾಡಬೇಕೆಂದು ವಿನಂತಿಸಿಕೊಂಡರು. ಈ ಕಾಮಗಾರಿಗಳನ್ನು ಸಂತೋಷ್ ಪಾಟೀಲ್ ತಮ್ಮ ವೈಯಕ್ತಿಕವಾಗಿ ಮಾಡಿಕೊಂಡಿಲ್ಲ. ಈ ಕಾಮಗಾರಿಗಳನ್ನು ಸಾರ್ವಜನಿಕ ಸೇವೆಗಾಗಿ ಮಾಡಲಾಗಿದೆ. ಇದರಿಂದ ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಲಾಯಿತು. ಸಂತೋಷ್ ಪಾಟೀಲ್ ಕಾಮಗಾರಿ ನಡೆಸಲು, ಸಾಲ ಮಾಡಿ, ಮನೆಯ ಚಿನ್ನವನ್ನು ಅಡವಿಟ್ಟಿದ್ದಾರೆ. ಇದರಿಂದ ಬಾಕಿ ಹಣವನ್ನು ಸರ್ಕಾರ ಆದಷ್ಟು ಬೇಗ ನೀಡಬೇಕೆಂದು ಆಗ್ರಹಿಸಲಾಯಿತು.
ಯಡಿಯೂರಪ್ಪನವರಿಗೆ ವಿನಂತಿ :ಬಿ.ಎಸ್.ಯಡಿಯೂರಪ್ಪನವರು ರಾಜ್ಯದಲ್ಲಿ ನಾಲ್ಕು ಬಾರಿ ಸಿಎಂ ಆಗಿದ್ದವರು. ನಿಮ್ಮ ಪಕ್ಷ ಹಾಗೂ ಸಂಘಟನೆಗಿಂತ ಹೆಚ್ಚಾಗಿ ನಮ್ಮ ವೀರಶೈವ ಲಿಂಗಾಯತ ಸಮುದಾಯದವರು ನಿಮ್ಮ ಪರವಾಗಿದ್ದವರು. ಈಗ ಮೃತನಾಗಿರುವ ವ್ಯಕ್ತಿ ನಿಮ್ಮದೇ ಪಕ್ಷದ, ನಿಮ್ಮದೇ ಸಮಾಜದವರು. ಇದರಿಂದ ಅವರ ಕುಟುಂಬಕ್ಕೆ ಸಾಂತ್ವನ ಮಾಡುವುದಲ್ಲದೆ, ಬಾಕಿ ಹಣವನ್ನು ಬಿಡುಗಡೆಗೊಳಿಸಬೇಕೆಂದು ಎಸ್.ಪಿ.ದಿನೇಶ್ ಆಗ್ರಹಿಸಿದ್ದಾರೆ.
ನಿನ್ನೆ ಶಿವಮೊಗ್ಗದಲ್ಲಿ ನಡೆದ ಸಭೆಯಲ್ಲಿ ನೂರಕ್ಕೂ ಹೆಚ್ಚು ಜನ ಸಮಾಜದ ಮುಖಂಡರು ಹಾಜರಿದ್ದರು. ನಿನ್ನೆಯೇ ಸುಮಾರು 2.50 ಲಕ್ಷ ರೂ. ಸಂಗ್ರಹ ಮಾಡಲಾಗಿದೆ. ನಮ್ಮ ಸಮಾಜದ ವತಿಯಿಂದ ಪ್ರತಿಯೊಂದು ತಾಲೂಕಿನಲ್ಲಿ ದೇಣಿಗೆ ಸಂಗ್ರಹ ಮಾಡಲಾಗುವುದು. ಪ್ರತಿ ತಾಲೂಕಿನಲ್ಲಿ ದೇಣಿಗೆ ಸಂಗ್ರಹಕ್ಕೆ ಮುಖಂಡರನ್ನು ನೇಮಿಸಿ ಕೊಳ್ಳಲಾಗಿದೆ ಎಂದರು. ದೇವಾಲಯಗಳ ಮುಂದೆ ಬಾಕ್ಸ್ ಇಟ್ಟು, ಮುಖಂಡರ ಮನೆಗೆ ಹೋಗಿ ಸಂಗ್ರಹ ಮಾಡಲಾಗುವುದು ಎಂದು ಸಮಾಜದ ನಿರ್ದೇಶಕ ಹೆಚ್.ಸಿ.ಯೋಗೀಶ್ ತಿಳಿಸಿದ್ದಾರೆ.
ಇದನ್ನೂ ಓದಿ:ಆತ್ಮಹತ್ಯೆಗೂ ಮುನ್ನ ಮೂರು ದಿನ ಚಿಕ್ಕಮಗಳೂರು ಹೋಂ ಸ್ಟೇನಲ್ಲಿ ತಂಗಿದ್ದ ಸಂತೋಷ್ ಪಾಟೀಲ್