ಶಿವಮೊಗ್ಗ: ಆಶ್ರಯ ಬಡಾವಣೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಬಂದ ಹಿನ್ನೆಲೆ ಶೀಘ್ರವೇ ಈ ಕುರಿತು ತನಿಖೆ ನಡೆಸಿ, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಪೂರಕವಾದ ಜವಾಬ್ದಾರಿಯನ್ನು ಜಿಲ್ಲಾಧಿಕಾರಿ ನೇತೃತ್ವದ ತಂಡಕ್ಕೆ ವಹಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಆಶ್ರಯ ಬಡಾವಣೆ ಅವ್ಯವಹಾರ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು: ಕೆ.ಎಸ್.ಈಶ್ವರಪ್ಪ
ಆಶ್ರಯ ಬಡಾವಣೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಬಂದ ಹಿನ್ನೆಲೆ ಶೀಘ್ರವೇ ಈ ಕುರಿತು ತನಿಖೆ ನಡೆಸಿ, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಪೂರಕವಾದ ಜವಾಬ್ದಾರಿಯನ್ನು ಡಿಸಿ ನೇತೃತ್ವದ ತಂಡಕ್ಕೆ ವಹಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಶ್ರಯ ಮನೆಗಳ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಸಾಕಷ್ಟು ಅಕ್ರಮ ನಡೆದಿದೆ ಎಂಬ ದೂರುಗಳು ಕೇಳಿ ಬಂದಿವೆ. ಬೇರೆಯವರ ಹೆಸರಿಗೆ ಅಕ್ರಮ ನೋಂದಣಿ, ಒಬ್ಬೊಬ್ಬರಿಗೆ ಎರಡು ಕಡೆ ನಿವೇಶನ ಹಂಚಿಕೆ, ಹಂಚಿಕೆಯಾಗಿದ್ದು ಒಬ್ಬರಿಗೆ; ವಾಸಿಸುತ್ತಿರುವುದು ಬೇರೊಬ್ಬರು ಹೀಗೆ ಅನೇಕ ದೂರುಗಳು ಕೇಳಿ ಬಂದಿವೆ. ಇದರಲ್ಲಿ ಮಧ್ಯವರ್ತಿಗಳು ಮತ್ತು ಪಾಲಿಕೆ ಸೇರಿದಂತೆ ಇತರೆ ಅಧಿಕಾರಿಗಳು, ಸಿಬ್ಬಂದಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಹಾಗಾಗಿ ಈ ಪ್ರಕರಣವನ್ನು ತನಿಖೆಗೆ ಒಳಪಡಿಸಲಾಗುವುದು ಎಂದರು.
ಈ ಕುರಿತಂತೆ ಈಗಾಗಲೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿವಿಧ ಅಧಿಕಾರಿಗಳ ಸಮಿತಿ ರಚಿಸಲಾಗಿದೆ. ಸಾರ್ವಜನಿಕರಿಂದ ಬಂದ ಆಧಾರಸಹಿತ ದೂರುಗಳನ್ನು ಗಮನಿಸಲಾಗುವುದು. ಪಾಲಿಕೆ ವ್ಯಾಪ್ತಿಯಲ್ಲಿ ಆಗಿದ್ದರೆ ಅಲ್ಲಿನ ಕಡತಗಳನ್ನು ನೋಡಲಾಗುವುದು. ಸಂಪೂರ್ಣ ತನಿಖೆಯ ನಂತರ ಜಿಲ್ಲಾಧಿಕಾರಿಗಳ ವರದಿ ಆಧಾರದ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. 3 ಸಾವಿರ ಮನೆಗಳ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಆದಷ್ಟು ಬೇಗ ಕಾಮಗಾರಿ ಆರಂಭಿಸಿ, ಫಲಾನುಭವಿಗಳಿಗೆ ಮನೆಗಳನ್ನು ನೀಡಲಾಗುವುದು ಎಂದು ಭರವಸೆ ಕೊಟ್ಟರು.