ಶಿವಮೊಗ್ಗ:ಗೌರವಯುತವಾದ ನಡತೆಯನ್ನು ಹೊಂದಿ ಸಮಾಜಕ್ಕಾಗಿ ದುಡಿದರೆ ಸಮಾಜದಲ್ಲಿ ನಾವು ಅಜರಾಮರವಾಗಿ ಉಳಿಯಲು ಸಾಧ್ಯ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಕೆ. ಎ ದಯಾನಂದ್ ಹೇಳಿದ್ದಾರೆ.
ಸ್ಟುಡೆಂಟ್ ಪೊಲೀಸ್ ಕೆಡೆಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಕೆ. ಎ. ದಯಾನಂದ್ ನಗರದ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ರಾಜ್ಯ ಮೀಸಲು ಪೊಲೀಸ್ ಪಡೆ ಆಯೋಜಿಸಿದ್ದ ಸ್ಟುಡೆಂಟ್ ಪೊಲೀಸ್ ಕೆಡೆಟ್ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ಸಮಾಜದಲ್ಲಿ ಕಾಣುವ ಸರಿ ತಪ್ಪುಗಳಿಗೆ ಕನ್ನಡಿಯಾಗಿರಬೇಕು. ಯಾವುದೇ ಕಾನೂನು ಬಾಹಿರ ಘಟನೆಗಳು ಕಂಡರು ಸಹ ಅದನ್ನು ವಿರೋಧಿಸಿ ಸರಿ ದಾರಿಗೆ ತರುವ ಪ್ರಯತ್ನ ಮಾಡಬೇಕು. ಈ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಹೇಳಿದರು.
ಈ ನಿಟ್ಟಿನಲ್ಲಿ ವಿದ್ಯಾಭ್ಯಾಸದ ಜೊತೆಗೆ ಕಾನೂನು, ಸಮಯ ಪ್ರಜ್ಞೆ, ಮಾದಕ ವ್ಯಸನ ಮುಕ್ತವಾಗಿಸುವ ಕುರಿತು ಅರಿವು ಮೂಡಿಸಿ, ಸ್ವಸ್ಥ ನಾಗರಿಕ ಸಮಾಜವನ್ನು ಸೃಷ್ಟಿಸಿ ಸ್ವಸ್ಥ ದೇಶವನ್ನು ನಿರ್ಮಿಸುವ ಉದ್ದೇಶದಿಂದ ಸ್ಟುಡೆಂಟ್ ಪೊಲೀಸ್ ಕೆಡೆಟ್ ಘಟಕವನ್ನು ರಚಿಸುವ ಕಾರ್ಯವನ್ನು ಪೊಲೀಸ್ ಪಡೆ ಕೈಗೊಂಡಿದೆ ಎಂದರು. ವಿದ್ಯಾರ್ಥಿಗಳು ಮನಸ್ಸನ್ನು ಸದಾ ತೆರೆದಿಟ್ಟುಕೊಂಡು ಓದಿನೊಂದಿಗೆ ಸಾಂಸ್ಕೃತಿಕ ಚಟುವಟಿಕೆ, ಕ್ರೀಡೆ, ಕಲೆ, ಸಂಗೀತ ಇನ್ನು ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಾದ ಮಂಜುನಾಥ್ ಅಣಜಿ, ದಾಹೂಲ್ ಸಾಬ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಉಪಸ್ಥಿತರಿದ್ದರು. ಹಾಗೂ ವಿವಿಧ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.