ಶಿವಮೊಗ್ಗ: ನಗರದಲ್ಲಿ ಹರ್ಷ ಹತ್ಯೆ ಬಳಿಕ ಗಲಾಟೆಗಳು ಸಾಮಾನ್ಯ ಎನ್ನುವಂತಾಗಿದೆ. ಹೊರವಲಯದ ಪ್ರದೇಶಗಳಲ್ಲಂತೂ ಗಾಂಜಾ ಅಮಲಿನಲ್ಲಿ ಸಿಕ್ಕಸಿಕ್ಕವರ ಮೇಲೆ ಹಲ್ಲೆ ಪ್ರಕರಣಗಳು ನಡೆಯುತ್ತಲೇ ಇವೆ. ಕೋಮು ವೈಷಮ್ಯವೂ ಹೆಚ್ಚಲಾರಂಭಿಸಿದೆ. ಅದರಲ್ಲೂ ಊರುಗಡೂರು, ಸೂಳೆಬೈಲು ಭಾಗದಲ್ಲಂತೂ ರಾತ್ರಿ ವೇಳೆ ಜನರು ಓಡಾಡಲು ಭಯಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಊರುಗಡೂರು ಭಾಗದಲ್ಲಿ ಪೊಲೀಸ್ ಠಾಣೆ ನಿರ್ಮಾಣ ಮಾಡಲು ಪೊಲೀಸ್ ಇಲಾಖೆ ಮುಂದಾಗಿದೆ.
ಹರ್ಷ ಹತ್ಯೆ ಬಳಿಕ ಶಿವಮೊಗ್ಗ ನಗರದ ಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ವಾರದ ಹಿಂದೆ ದುಷ್ಕರ್ಮಿಗಳು ಕಾರೊಂದರ ಮೇಲೆ ರಾಡ್ನಿಂದ ಹಲ್ಲೆ ನಡೆಸಿದ್ದು ಮತ್ತೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅಲ್ಲಲ್ಲಿ ಕಲ್ಲು ತೂರಾಟಗಳೂ ಆರಂಭಗೊಂಡಿತ್ತು. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಹರಸಾಹಸವನ್ನೇ ಪಡಬೇಕಾಗಿತ್ತು.
ಎಲ್ಲವನ್ನು ಅವಲೋಕಿಸಿ ಊರುಗಡೂರು ಭಾಗದಲ್ಲಿ ಹೊಸದಾಗಿ ಪೊಲೀಸ್ ಠಾಣೆ ಆರಂಭಿಸಲು ಪೊಲೀಸ್ ಇಲಾಖೆ ತೀರ್ಮಾನಿಸಿದೆ. ಇದಕ್ಕೆ ಬೇಕಾದ ಅಂಕಿ-ಅಂಶ, ಮಾಹಿತಿ ಸಂಗ್ರಹಿಸಲು ಶಿವಮೊಗ್ಗ ಪೊಲೀಸ್ ಇಲಾಖೆ ಆರಂಭಿಸಿದೆ.