ಶಿವಮೊಗ್ಗ: ಭದ್ರಾವತಿ ತಾಲೂಕು ಮೈದೂಳಲು ಗ್ರಾಮದ 40ಕ್ಕೂ ಅಧಿಕ ಜನರಲ್ಲಿ ವಾಂತಿ - ಭೇದಿ ಕಾಣಿಸಿಕೊಂಡಿದೆ. ವಾಂತಿ- ಭೇದಿ ಉಂಟಾಗಲು ಕುಡಿವ ನೀರಿನ ಸಮಸ್ಯೆಯೇ ಕಾರಣ. ಮೈದೂಳಲು ಗ್ರಾಮದ ರಾಜಭಕ್ಷವಾಲಿ ದೇವಸ್ಥಾನದ ಹಿಂಭಾಗದ ಟ್ಯಾಂಕ್‌ನಲ್ಲಿನ ನೀರು ಕುಡಿದವರ ಆರೋಗ್ಯದಲ್ಲಿ ಏರುಪೇರಾಗಿದೆ. ರಾಜಾಭಕ್ಷವಾಲಿ ದೇವಾಲಯದ ಹಿಂಭಾಗದ ಟ್ಯಾಂಕ್ ವಾಲ್ನಲ್ಲಿನ ಸಮಸ್ಯೆಯಿಂದ ಗಲೀಜು ನೀರು ಟ್ಯಾಂಕ್ಗೆ ಸೇರಿದ ಪರಿಣಾಮ ವಾಂತಿ- ಭೇದಿ ಕಾಣಿಸಿಕೊಂಡಿದೆ ಎನ್ನಲಾಗಿದೆ.
ಈಗಾಗಲೇ ಟ್ಯಾಂಕ್ ನೀರನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಅಸ್ವಸ್ಥಗೊಂಡವರಿಗೆ ಮಲ್ಲಾಪುರ ಹಾಗೂ ಆನವೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಇಂದು ಯಾವುದೇ ಹೊಸ ಪ್ರಕರಣ ದಾಖಲಾಗಿಲ್ಲ. ಸದ್ಯ ಎಲ್ಲರ ಸ್ಥಿತಿ ಹತೋಟಿಯಲ್ಲಿದೆ. ಅಸ್ವಸ್ಥಗೊಂಡವರು ಚಿಕಿತ್ಸೆ ಪಡೆದು ಮನೆಗೆ ವಾಪಸ್ ಆಗುತ್ತಿದ್ದಾರೆ.
ಗ್ರಾಮದಲ್ಲಿ ಪರಿಸ್ಥಿತಿ ಚೆನ್ನಾಗಿದೆ. ಎಲ್ಲರಿಗೂ ಟ್ಯಾಂಕ್ ಮೂಲಕ ಕುಡಿವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಸದ್ಯಕ್ಕೆ ಗ್ರಾಮದಲ್ಲಿ ಯಾವುದೇ ಗಂಭೀರ ಪ್ರಕರಣಗಳಿಲ್ಲ ಎಂದು ಸ್ಥಳೀಯ ವೈದ್ಯಾಧಿಕಾರಿ ಡಾ.ಜಗದೀಶ್ ಪಾಟೀಲ್ ಈಟಿವಿ ಭಾರತಕ್ಕೆ ದೂರವಾಣಿ ಮೂಲಕ ತಿಳಿಸಿದ್ದಾರೆ.