ಶಿವಮೊಗ್ಗ:ರಾಜ್ಯದಲ್ಲಿ ಆನ್ಲೈನ್ ತರಗತಿಗಳು ಶುರುವಾದಾಗಿನಿಂದ ಈವರೆಗೂ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಲೇ ಇದೆ. ಅದರಲ್ಲೂ ನಗರಕ್ಕಿಂತ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚು. ಸರ್ಕಾರಿ ಶಾಲಾ ಮಕ್ಕಳಿಗೆ ಚಂದನ ವಾಹಿನಿಯಲ್ಲಿ, ಖಾಸಗಿ ಶಾಲೆಗಳಲ್ಲಿ ಮೊಬೈಲ್ ಮೂಲಕ ಆನ್ಲೈನ್ ತರಗತಿ ನಡೆಸಲಾಗುತ್ತಿದೆ.
ನೆಟ್ವರ್ಕ್ ಸಮಸ್ಯೆ ಹೆಚ್ಚು: ಒಂದು ಗಂಟೆಯ ಆನ್ಲೈನ್ ಕ್ಲಾಸ್ಗೆ ಮಕ್ಕಳು ಲಾಗಿನ್ ಆಗಲು 10 ನಿಮಿಷ ಬೇಕಾಗುತ್ತದೆ. ನೆಟ್ವರ್ಕ್ ಸಮಸ್ಯೆ ಅದಕ್ಕೆ ಕಾರಣವಾಗಿದ್ದು, ಇದು ಗ್ರಾಮೀಣ ಪ್ರದೇಶಗಳಲ್ಲೇ ಹೆಚ್ಚು. ಅದಲ್ಲದೇ, ಆನ್ಲೈನ್ ಪಾಠ ಮಾಡುವ ಶಿಕ್ಷಕ ಹಾಗೂ ವಿದ್ಯಾರ್ಥಿಗಳ ನಡುವೆ ನೇರ ಸಂಪರ್ಕವಿರದ ಕಾರಣ ಮಕ್ಕಳು ಅಜಾಗರೂಕತೆಯಿಂದ ವರ್ತಿಸುತ್ತಿದ್ದಾರೆ. ವಿದ್ಯಾರ್ಥಿಗಳನ್ನು ನಿಯಂತ್ರಣಕ್ಕೆ ಪಡೆದುಕೊಳ್ಳಲೂ ಸಾಧ್ಯವಾಗುತ್ತಿಲ್ಲ.
ಗ್ರಾಮೀಣ ಭಾಗದ ಮಕ್ಕಳಿಗೆ ಪಾಲಕರು ತಮ್ಮ ಮೊಬೈಲ್ ನೀಡಿರುತ್ತಾರೆ. ಪಾಠ ಕೇಳುವ ಸಂದರ್ಭದಲ್ಲಿ ಮೊಬೈಲ್ಗೆ ಪಾಲಕರ ಸಂಬಂಧಿಕರು ಕರೆ ಮಾಡುತ್ತಾರೆ. ಇದು ಶಿಕ್ಷಕರಿಗೆ ಹೆಚ್ಚು ತೊಂದರೆ ಕೊಡುತ್ತದೆ. ಮತ್ತೆ ಕೆಲವರು ಲಾಗಿನ್ ಆಗಿ ಹೋದರೆ ತರಗತಿ ಮುಗಿದ ಬಳಿಕ ಬರುತ್ತಾರೆ. ಹೀಗಾಗಿ, ಪೋಷಕರು ಮಕ್ಕಳ ಮೇಲೆ ನಿಗಾ ಇಡಬೇಕಾಗಿದೆ.
ಶಾಲೆಯ ಶುಲ್ಕ ಕಟ್ಟಲು ಪರದಾಟ:ಲಾಕ್ಡೌನ್ನಿಂದಾಗಿ ದಿನಗೂಲಿ ಕೆಲಸ ಮಾಡುವವರ ಪರಿಸ್ಥಿತಿ ಕೆಟ್ಟದಾಗಿದೆ. ಹೀಗಾಗಿ, ತಮ್ಮ ಮಕ್ಕಳಿಗೆ ಒಂದು ಮೊಬೈಲ್ ಕೊಡಿಸಲಾಗದೇ ಕಣ್ಣೀರು ಹಾಕುತ್ತಿದ್ದಾರೆ. ಅದು ಒಂದು ಸಮಸ್ಯೆಯಾದರೆ ಮತ್ತೊಂದು ಶಾಲಾ ಶುಲ್ಕ ಕಟ್ಟಲಾಗದೇ ಪರದಾಡುತ್ತಿದ್ದಾರೆ.
ಆನ್ಲೈನ್ ತರಗತಿ ಕುರಿತು ಅಭಿಪ್ರಾಯಳು ಮುಚ್ಚುವ ಪರಿಸ್ಥಿತಿಯಲ್ಲಿ ಖಾಸಗಿ ಶಾಲೆಗಳು:ಕೊರೊನಾಗೂ ಮುನ್ನ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿದ್ದ ಖಾಸಗಿ ಶಾಲೆಗಳ ಸ್ಥಿತಿ ಹೀನಾಯವಾಗಿದೆ. ಜಿಲ್ಲೆಯಲ್ಲಿ 103 ಅನುದಾನಿತ ಪ್ರಾಥಮಿಕ, 316 ಅನುದಾನ ರಹಿತ ಪ್ರಾಥಮಿಕ ಶಾಲೆಗಳಿವೆ. 146 ಅನುದಾನಿತ, 143 ಅನುದಾನ ರಹಿತ ಪ್ರೌಢಶಾಲೆಗಳಿವೆ. ಒಟ್ಟಾರೆ ಜಿಲ್ಲೆಯಲ್ಲಿ 562 ಶಾಲೆಗಳಿವೆ. ಅದರಲ್ಲಿ ದೊಡ್ಡ ಶಿಕ್ಷಣ ಸಂಸ್ಥೆಗಳು ವಿವಿಧ ಶಾಲೆ, ಕಾಲೇಜುಗಳು ಸ್ವಲ್ಪಮಟ್ಟಿಗೆ ಉಸಿರಾಡುತ್ತಿವೆ. ಆದರೆ, ಸಣ್ಣ ಶಾಲೆಗಳು ಉಸ್ತುವಾರಿ ಮಾಡಲಾಗದೇ ಮುಚ್ಚುವ ಹಂತಕ್ಕೆ ಬಂದಿವೆ.
ಆನ್ಲೈನ್ ತರಗತಿ ನಡೆಸುವ ಅವಕಾಶ ನೀಡಿದಾಗ ಖುಷಿಯಿಂದಲೇ ಪ್ರಾರಂಭಿಸಿದ ಖಾಸಗಿ ಶಾಲೆಗಳು, ಶಿಕ್ಷಕರನ್ನು ಮತ್ತೆ ಕರೆ ತಂದವು. ಆನ್ಲೈನ್ ತರಗತಿ ಪ್ರಾರಂಭಿಸಿ, ಶುಲ್ಕು ಕೇಳಿದರೆ ಪೋಷಕರು ಶಾಲೆ ಪ್ರಾರಂಭವಾಗುವುದೇ ಗೊತ್ತಿಲ್ಲ, ಹೇಗೆ ಶುಲ್ಕ ಭರಿಸಬೇಕು ಎಂದು ಕೇಳುತ್ತಿದ್ದಾರೆ. ಇನ್ನೂ ಕೆಲವರು ಶೇ.25ರಷ್ಟನ್ನು ಮಾತ್ರ ಶುಲ್ಕ ಕಟ್ಟಿದ್ದಾರೆ ಎನ್ನಲಾಗಿದೆ.
ಹೀಗಾಗಿ, ಶಿಕ್ಷಕರಿಗೆ ಸಂಬಳ, ಶಾಲೆಯ ಖರ್ಚು ನಿಭಾಯಿಸುವುದು ಕಷ್ಟಕರವಾಗಿದೆ. ಇದರಿಂದ ಶಾಲೆ ಪ್ರಾರಂಭಿಸಬೇಕು ಎಂದು ಖಾಸಗಿ ಶಾಲೆಗಳ ಮಾಲೀಕರು ಒತ್ತಾಯಿಸಿದ್ದಾರೆ. ಜಿಲ್ಲೆಯಲ್ಲಿ ಖಾಸಗಿ ಶಾಲೆಗಳು ಹೆಚ್ಚು ಶಾಲಾ ಶುಲ್ಕ ವಸೂಲಿ ಮಾಡುವ ಕುರಿತು ಯಾವುದೇ ದೂರು ಬಂದಿಲ್ಲ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.