ಶಿವಮೊಗ್ಗ:ನಗರದಲ್ಲಿ ದರೋಡೆಕೋರರಿಗೆ ಜನರೇ ಸರಿಯಾದ ಪಾಠ ಕಲಿಸಿದ್ದಾರೆ. ಹಾಡಹಗಲೇ ದರೋಡೆಗೆ ಯತ್ನಿಸಿದ ಖದೀಮನನ್ನು ಯುವಕರ ಗುಂಪೊಂದು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಗರದ ಕುವೆಂಪು ರಸ್ತೆಯ ನಂದಿ ಪೆಟ್ರೋಲ್ ಬಂಕ್ ಬಳಿ ಶುಕ್ರವಾರ ನಡೆದಿದೆ.
ಸಿನಿಮೀಯ ಶೈಲಿಯಲ್ಲಿ ದರೋಡೆಕೋರನನ್ನು ಹಿಡಿದ ಯುವಕರು ಸ್ಮಾರ್ಟ್ ಸಿಟಿ ಕಾಮಗಾರಿ ನಡೆಸುತ್ತಿದ್ದವರಿಂದ ಇಬ್ಬರು ಕಳ್ಳರು ಮೊಬೈಲ್ ಕಸಿದು ಪರಾರಿಯಾಗಿದ್ದಾರೆ. ಜೊತೆಗೆ ಮೊಪೈಡ್ ಬೈಕ್ನಲ್ಲಿ ಹೋಗುತ್ತಿದ್ದ ಅಪ್ಪ ಮಗನಿಗೆ ಚಾಕು ತೋರಿಸಿ, ಅವರಿಂದಲೂ ಹಣ ಕಸಿದುಕೊಂಡು ಎಸ್ಕೇಪ್ ಆಗುತ್ತಿದ್ದ ಕಿಡಿಗೇಡಿಗಳನ್ನು ಯುವಕರ ಗುಂಪೊಂದು ಬೆನ್ನತ್ತಿದೆ.
ಬಳಿಕ ಕಳ್ಳರು ಶರಾವತಿ ನಗರದಲ್ಲಿ ಬೈಕ್ ಬಿಟ್ಟು, ಅಲ್ಲಿನ ಮನೆಯೊಂದಕ್ಕೆ ನುಗ್ಗಿದ್ದಾರೆ. ಅವರನ್ನು ಹಿಂಬಾಲಿಸಿಕೊಂಡು ಬಂದ ಮನೋಜ್ ಹಾಗೂ ರಾಜೇಶ್ ಮನೆ ಒಳಗೆ ಹೋಗಿ ಹಿಡಿಯಲು ಯತ್ನಿಸಿದ್ದಾರೆ. ಆದರೆ, ಖದೀಮರು ಅವರ ಕಲ್ಲಿನಿಂದ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಆದರೂ ಬಿಡದ ಯುವಕರು ಓರ್ವನನ್ನು ಹಿಡಿದಿದ್ದು, ಇನ್ನೋರ್ವ ಪರಾರಿಯಾಗಿದ್ದಾನೆ.
ಕೂಡಲೇ ಸ್ಥಳಕ್ಕಾಗಮಿಸಿದ ದೊಡ್ಡಪೇಟೆ ಪೊಲೀಸರು ಸ್ಥಳ ಮಹಜರು ನಡೆಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಗಾಂಜಾ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದಾರೆ ಎಂಬ ಶಂಕೆಯಿದೆ.
ಇದನ್ನೂ ಓದಿ:ಕ್ರೂರಾತಿಕ್ರೂರ.. ಮೊಬೈಲ್ ಕಳ್ಳತನ ಮಾಡಲು ವ್ಯಕ್ತಿಯನ್ನು ರಸ್ತೆಯಲ್ಲಿ ಎಳೆದೊಯ್ದರು..!