ಶಿವಮೊಗ್ಗ:ನೂತನ ರಾಷ್ಟ್ರೀಯ ಶಿಕ್ಷಣ ನೀತಿ ರದ್ದುಗೊಳಿಸಲು ಆಗ್ರಹಿಸಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್ ಅವರಿಗೆ ಜಿಲ್ಲಾ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (NSUI) ಕಾರ್ಯಕರ್ತರಿಂದ ಕಪ್ಪು ಬಾವುಟ ಪ್ರದರ್ಶನ, ಹಾಗೂ ಘೇರಾವ್ ಹಾಕಲು ಯತ್ನಿಸಿದ ಘಟನೆ ನಗರದ ಸಹ್ಯಾದ್ರಿ ಕಾಲೇಜು ಬಳಿ ನಡೆದಿದೆ.
ಎನ್ಎಸ್ಯುಐ ಕಾರ್ಯಕರ್ತರಿಂದ ಸಚಿವ ಅಶ್ವತ್ಥ್ ನಾರಾಯಣ್ಗೆ ಘೇರಾವ್ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಸಹ್ಯಾದ್ರಿ ಕಾಲೇಜಿನಲ್ಲಿ ಆಯೋಜಿಸಿದ ಸಂವಾದ ಕಾರ್ಯಕ್ರಮಕ್ಕೆ ಹೋಗುವ ವೇಳೆಯಲ್ಲಿ ಸಚಿವರಿಗೆ ಮಳೆ ಲೆಕ್ಕಿಸದೇ ಕಾರ್ಯಕರ್ತರು ಗೇರಾವ್ ಹಾಕಲು ಯತ್ನಿಸಿ, ಕಪ್ಪು ಬಾವುಟ ಪ್ರದರ್ಶನ ಮಾಡಿದರು. ಈ ವೇಳೆ, ಪೊಲೀಸರು ಕಾರ್ಯಕರ್ತರನ್ನು ತಡೆದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಯಾವುದೇ ಚರ್ಚೆಯಿಲ್ಲದೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಅನುಸರಿಸುವ ಮಾರ್ಗಗಳು ಸರಿಯಲ್ಲ. ಇನ್ನು ಈ ಶಿಕ್ಷಣ ನೀತಿಯಲ್ಲಿ ಕಡ್ಡಾಯ ಮತ್ತು ಸಮಾನ ಶಿಕ್ಷಣದ ಬಗ್ಗೆ ಯಾವುದೇ ರೀತಿಯಲ್ಲಿ ಹೇಳಲಾಗಿಲ್ಲ.
ಈ ಶಿಕ್ಷಣ ನೀತಿ ಜಾರಿಗೊಳಿಸಿರುವುದರಿಂದ ಶಿಕ್ಷಣ ತೊರೆಯುವವರ ಸಂಖ್ಯೆ ಹೆಚ್ಚಾಗುತ್ತದೆ. ಹಾಗೂ ಶಿಕ್ಷಣ ವ್ಯಾಪಾರೀಕರಣ, ಖಾಸಗೀಕರಣಕ್ಕೆ ಹೆಚ್ಚು ಆದ್ಯತೆ ನೀಡುವಂತಾಗುತ್ತದೆ. ಇದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿದೆ ಎಂದು ಆರೋಪಿಸಿ ಕಪ್ಪು ಬಾವುಟ ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಎನ್ಎಸ್ಯುಐನ ರಾಜ್ಯ ಕಾರ್ಯದರ್ಶಿ ಬಾಲಾಜಿ, ನಗರ ಅಧ್ಯಕ್ಷ ವಿಜಯ್, ಜಿಲ್ಲಾ ಕಾರ್ಯಾಧ್ಯಕ್ಷ ರವಿ , ಅಲ್ಪ ಸಂಖ್ಯಾತ ಕಾಂಗ್ರೆಸ್ನ ನಗರ ಅಧ್ಯಕ್ಷ ಮಹಮ್ಮದ್ ನಿಹಾಲ್, ಯುವ ಕಾಂಗ್ರೆಸ್ನ ರಾಜ್ಯ ಕಾರ್ಯದರ್ಶಿ ಚೇತನ್, ಯುವ ಕಾಂಗ್ರೆಸ್ ಮುಖಂಡ ಮಧುಸೂದನ್, ದಕ್ಷಿಣ ಬ್ಲಾಕ್ ಅಧ್ಯಕ್ಷ ವಿನಯ್ ಸೇರಿದಂತೆ ಇತರರು ಉಪಸ್ಥಿತರಿದ್ದರು.