ಶಿವಮೊಗ್ಗ :ವಸ್ತುನಿಷ್ಟವಾಗಿ, ಯಾವುದೇ ಪಕ್ಷದ ಹಂಗಿಲ್ಲದೇ ನ್ಯಾಯಸಮ್ಮತವಾಗಿ ಒಂದು ಹೋರಾಟ ಆರಂಭಗೊಂಡರೆ ಅದು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗುತ್ತದೆ ಎಂಬುದಕ್ಕೆ ಉತ್ತಮ ಉದಾಹರಣೆ ಮಲೆನಾಡಿನಲ್ಲಿ ಆರಂಭಗೊಂಡ ನೆಟ್ವರ್ಕ್ ಹೋರಾಟ.
ನೋ ನೆಟ್ವರ್ಕ್, ನೋ ವೋಟಿಂಗ್ :ಜಿಲ್ಲೆಯ ಕುಗ್ರಾಮ ಕಾರಣಿ ಹಾಗೂ ಹಾಳಸಸಿ ಎಂಬ ಶರಾವತಿ ಹಿನ್ನೀರಿನ ಕುಗ್ರಾಮಗಳಲ್ಲಿ 'ನೋ ನೆಟ್ವರ್ಕ್, ನೋ ವೋಟಿಂಗ್'ಎಂಬ ಅಭಿಯಾನ ಜೊತೆಜೊತೆಗೆ ಹೋರಾಟ ಆರಂಭಗೊಂಡಿತ್ತು. ಕುಗ್ರಾಮದಲ್ಲಿ ಆರಂಭಗೊಂಡ ಈ ಹೋರಾಟ ಇದೀಗ ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೇ ಅಕ್ಕಪಕ್ಕದ ಜಿಲ್ಲೆಗಳಿಗೂ ವ್ಯಾಪಿಸಿದೆ. ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆ ಕಣ್ಮುಂದೆ ಇರುವ ಕಾರಣಕ್ಕಾಗಿ ಈ ಹೋರಾಟ ರಾಜಕಾರಣಿಗಳ ನಿದ್ದೆಗೆಡಿಸಿದೆ. ಶಿವಮೊಗ್ಗದಲ್ಲಿ ನಡೆದ ಜನಾಶೀರ್ವಾದ ಯಾತ್ರೆಯಲ್ಲೂ ಈ ವಿಷಯ ಮಾರ್ದನಿಸಿದ್ದು ವಿಶೇಷ.
ಚುನಾವಣೆ ಬಹಿಷ್ಕಾರ?:ಮಲೆನಾಡಿನ ಕುಗ್ರಾಮಗಳಲ್ಲಿ ಮೊಬೈಲ್ ನೆಟ್ವರ್ಕ್ ಎಂಬುದು ಮರೀಚಿಕೆಯಾಗಿದೆ. ಕೊರೊನಾ ಸಂದರ್ಭದಲ್ಲಿ ನಗರಗಳಲ್ಲಿ ಕೆಲಸ ಮಾಡುತ್ತಿದ್ದವರು ಹಳ್ಳಿಗಳಿಗೆ ಆಗಮಿಸಿ ವರ್ಕ್ ಫ್ರಂ ಹೋಂ ಮಾಡುವ ಸಂದರ್ಭ ಹೋರಾಟ ತೀವ್ರಗೊಂಡಿದೆ. ಮೊಬೈಲ್ ನೆಟ್ವರ್ಕ್ ಟವರ್ ನಿರ್ಮಾಣ ಮಾಡಿದರೆ ಮಾತ್ರ ನಾವು ಮುಂದಿನ ಚುನಾವಣೆಯಲ್ಲಿ ಮತದಾನ ಮಾಡುತ್ತೇವೆ. ಇಲ್ಲದಿದ್ದಲ್ಲಿ ಚುನಾವಣೆಯನ್ನೇ ಬಹಿಷ್ಕಾರ ಮಾಡುತ್ತೇವೆ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.
ಇತರೆ ಜಿಲ್ಲೆಗೂ ಹರಡಿದ ಹೋರಾಟದ ಕಿಚ್ಚು :ಹೀಗೆ ಕಾರಣಿ ಎಂಬ ಕುಗ್ರಾಮದಲ್ಲಿ ಆರಂಭಗೊಂಡ ಹೋರಾಟ ಇದೀಗ ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೇ ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗೂ ವ್ಯಾಪಿಸಿದೆ. ಹೀಗಾಗಿ, ಖುದ್ದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರಿಗೆ ಮಲೆನಾಡು ಭಾಗದ ನೆಟ್ವರ್ಕ್ ಸಮಸ್ಯೆ ಪರಿಹರಿಸಬೇಕು, ಇದೊಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ತಿಳಿಸಿದರು.