ಶಿವಮೊಗ್ಗ :2010ರಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾದ ನಕ್ಸಲರ ನಾಯಕಿ ಹೊಸಗದ್ದೆ ಪ್ರಭಾ ಇದೇ ಮೊದಲ ಬಾರಿಗೆ ಸಾರ್ವಜನಿಕರ ಎದುರು ಕಾಣಿಸಿಕೊಂಡಿದ್ಧು, ತಮಿಳುನಾಡಿನ ವೆಲ್ಲೂರು ಪೊಲೀಸರಿಗೆ ಶರಣಾಗಿದ್ದಾರೆ.
ಈಕೆಯ ಪತಿ, ನಕ್ಸಲ್ ಮುಖಂಡ ಬಿ.ಜಿ ಕೃಷ್ಣಮೂರ್ತಿ ಬಂಧನದ ನಂತರ ಮಾನಸಿಕ ಖಿನ್ನತೆಗೊಳಗಾಗಿದ್ದ ಹೊಸಗದ್ದೆ ಪ್ರಭಾ ಅನಾರೋಗ್ಯದಿಂದ ಬಳಲುತ್ತಿದ್ದರು. ಪತಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಪ್ರಭಾ, ಕೃಷ್ಣಮೂರ್ತಿ ಬಂಧನದ ಬೆನ್ನಲ್ಲೆ ತಾನೂ ಕೂಡ ಪೊಲೀಸರಿಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಮೂಲತಃ ಶಿವಮೊಗ್ಗ ಜಿಲ್ಲೆಯ ಆಗುಂಬೆ ಸನಿಹದ ಹೊಸಗದ್ದೆ ಗ್ರಾಮದವರಾದ ಪ್ರಭಾ, ನಕ್ಸಲ್ ಸಂಘಟನೆಯಲ್ಲಿ ಮಂಚೂಣಿಯಲ್ಲಿದ್ದರು. ಮಲೆನಾಡಿನಲ್ಲಿ ನಕ್ಸಲ್ ಸಂಘಟನೆ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಸಂಘಟನೆಯನ್ನು ಮುನ್ನೆಡಸುತ್ತಿದ್ದರು. ಮಲೆನಾಡಿನಲ್ಲಿ ನಕ್ಸಲ್ ಸಂಘಟನೆಗೆ ಹಿನ್ನಡೆ ಯಾದ ಬೆನ್ನಲ್ಲೆ ಹಲವು ಮಂದಿ ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದರು. ಮತ್ತೆ ಕೆಲವರು ಸೈದ್ದಾಂತಿಕ ಭಿನ್ನಾಭಿಪ್ರಾಯದಿಂದ ಸಂಘಟನೆ ತೊರೆದರೆ, ಮತ್ತೆ ಕೆಲವರು ಪೊಲೀಸರಿಗೆ ಶರಣಾಗಿದ್ದಾರೆ.
ಪ್ರಭಾ ಹುಡುಕಿ ಕೊಟ್ಟವರಿಗೆ ₹5 ಲಕ್ಷ :ಮಲೆನಾಡಿನಲ್ಲಿ ನಕ್ಸಲ್ ಸಂಘಟನೆಗೆ ಹಿನ್ನಡೆಯಾಗುತ್ತಿದ್ದಂತೆ ಇವರು ತಮ್ಮ ಕ್ಷೇತ್ರವ್ಯಾಪ್ತಿಯನ್ನು ಕರ್ನಾಟಕ ತಮಿಳುನಾಡು ಕೇರಳ ಗಡಿಭಾಗದಲ್ಲಿ ವಿಸ್ತರಿಸಿದ್ದರು. ನಕ್ಸಲ್ ನಾಯಕಿ ಹೊಸಗದ್ದೆ ಪ್ರಭಾ ವಿರುದ್ಧ ರಾಜ್ಯದಲ್ಲಿ 40ಕ್ಕೂ ಅಧಿಕ ಕೇಸ್‌ಗಳಿವೆ. ಶಿವಮೊಗ್ಗದಲ್ಲಿ ತಲ್ಲೂರು ಅಂಗಡಿ ಬಸ್ ಸುಟ್ಟ ಪ್ರಕರಣ ಸೇರಿದಂತೆ ಶಿವಮೊಗ್ಗದಲ್ಲಿ ನಾಲ್ಕು ಪ್ರಕರಣ ದಾಖಲಾಗಿದ್ದವು. ಆಕೆಯನ್ನು ಹುಡುಕಿಕೊಟ್ಟವರಿಗೆ ಐದು ಲಕ್ಷ ಬಹುಮಾನ ಕೂಡ ಘೋಷಿಸಲಾಗಿತ್ತು.